ADVERTISEMENT

ಎನ್‌ಕೌಂಟರ್‌ಗೆ ನಾಲ್ವರು ಉಗ್ರರು ಬಲಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 5:46 IST
Last Updated 3 ಸೆಪ್ಟೆಂಬರ್ 2015, 5:46 IST

ಶ್ರೀನಗರ (ಪಿಟಿಐ): ಕಣಿವೆ ರಾಜ್ಯ ಕಾಶ್ಮೀರದಲ್ಲಿ ಗುಂಡಿನ ಸದ್ದು ಮುಂದುವರೆದಿದೆ. ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವಣ ಎನ್‌ಕೌಂಟರ್‌ ಘಟನೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾ ಪ್ರದೇಶದಲ್ಲಿ ಬುಧವಾರ ತಡ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಗರದಿಂದ 95 ಕಿ.ಮೀ. ದೂರದಲ್ಲಿರುವ ಹಂದ್ವಾರಾ ಪ್ರದೇಶದ ಸೊಚಲ್ಯಾರಿ ಅರಣ್ಯದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಳೆದ ರಾತ್ರಿ (ಬುಧವಾರ) ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಗುರುವಾರ ನಸುಕಿನ ವರೆಗೂ ಸಾಗಿದ ಎನ್‌ಕೌಂಟರ್‌ನಲ್ಲಿ 9 ಪಾರಾಗೆ ಸೇರಿದ ಯೋಧರೊಬ್ಬರು ಹುತಾತ್ಮರಾದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಇನ್ನು, ಘಟನೆಯಲ್ಲಿ ಹತರಾದ ನಾಲ್ವರು ಉಗ್ರರ ಗುರುತು ಪತ್ತೆಯಾಗಿಲ್ಲ. ಅವರು ಯಾವ ಸಂಘಟನೆಗೆ ಸೇರಿದವರು ಎಂಬುದೂ ತಿಳಿದಿಲ್ಲ ಎಂದೂ ಅವರು ಹೇಳಿದ್ದಾರೆ.

ಇದು ಎರಡನೇ ಯಶಸ್ಸು: ಭಾರತೀಯ ಭದ್ರತಾ ಪಡೆಗೆ ದೊರೆತ ಎರಡನೇ ಯಶಸ್ಸು ಇದಾಗಿದೆ. ಬುಧವಾರ ಬೆಳಿಗ್ಗೆಯಷ್ಟೇ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್‌ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಕೊಲ್ಲಲಾಗಿತ್ತು. ಆ ಘಟನೆಯಲ್ಲಿ ಒಬ್ಬ ಯೋಧ ಕೂಡ ಅಮರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.