ADVERTISEMENT

ಒಂದು ಶ್ರೇಣಿಗೆ ಒಂದು ಪಿಂಚಣಿ– ‘ಸುಪ್ರೀಂ’

ನ್ಯಾಯಮೂರ್ತಿಗಳ ನಿವೃತ್ತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಸಾಂವಿಧಾನಿಕ ಹುದ್ದೆಗಳಾದ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳಿಗೂ ‘ಒಂದು ಶ್ರೇಣಿ ಒಂದೇ ರೀತಿಯ ಪಿಂಚಣಿ’ ನೀತಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಉನ್ನತ ನ್ಯಾಯಾಲಯಗಳಿಗೆ ಬಡ್ತಿ ಪಡೆದು ನಿವೃತ್ತರಾದಾಗ ನೀಡುವಂತಹ ಸೌಲಭ್ಯವನ್ನು ವಕೀಲಿ ವೃತ್ತಿಯಿಂದ ನೇರವಾಗಿ ನೇಮಕಗೊಂಡ ನ್ಯಾಯಮೂರ್ತಿಗಳಿಗೂ ವಿಸ್ತರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಹೇಳಿದೆ.

‘ನೇರ ನೇಮಕ, ಬಡ್ತಿ ಮೂಲಕ ನೇಮಕಗೊಂಡವರ ಪಿಂಚಣಿಯಲ್ಲಿ ತಾರತಮ್ಯ ಇರಕೂಡದು. ಏಕೆಂದರೆ ಇದು ನ್ಯಾಯಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜೊತೆಗೆ, ಅರ್ಹ ವಕೀಲರು  ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿ­ಗಳಾಗಲು ಮುಂದಾ­ಗು­ವುದಿಲ್ಲ. ಇದ­ರಿಂದ ನ್ಯಾಯದಾನದ ಗುಣಮಟ್ಟವು ಕುಸಿಯುವ ಅಪಾಯ ಇದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಹೈಕೋರ್ಟ್‌ಗೆ ನೇಮಕಗೊಂಡರೆ ಅವರು ಅಧೀನ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಿವೃತ್ತಿ ಸೌಲಭ್ಯ ನೀಡಲಾಗುತ್ತದೆ. ಆದರೆ, ಉನ್ನತ ನ್ಯಾಯಾಲಯಗಳಿಗೆ ನೇರವಾಗಿ ನೇಮಕಗೊಂಡ ಹಿರಿಯ ವಕೀಲರಿಗೆ ಇಂತಹ ಸೌಲಭ್ಯ ಇಲ್ಲ. ಅವರು ವಕೀಲರಾಗಿ ಸಲ್ಲಿಸಿದ ಸೇವಾವಧಿಯನ್ನು ನಿವೃತ್ತಿ ಸೌಲಭ್ಯಕ್ಕೆ ಪರಿಗಣಿಸುತ್ತಿಲ್ಲ ಎಂದು ಆಪಾದಿಸಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು ಈ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.