ADVERTISEMENT

ಒಡಿಶಾ ಮಾಜಿ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2015, 19:30 IST
Last Updated 21 ಏಪ್ರಿಲ್ 2015, 19:30 IST
ಒಡಿಶಾ ಮಾಜಿ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್‌ ಇನ್ನಿಲ್ಲ
ಒಡಿಶಾ ಮಾಜಿ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್‌ ಇನ್ನಿಲ್ಲ   

ಭುವನೇಶ್ವರ (ಪಿಟಿಐ): ಒಡಿಶಾ ಮಾಜಿ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್‌  (89) ಅವರು ಮಂಗಳವಾರ ಬೆಳಿಗ್ಗೆ ತಿರುಪತಿಯಲ್ಲಿ ನಿಧನ ಹೊಂದಿದರು.

ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಪಟ್ನಾಯಕ್‌ ತಿರುಪತಿಗೆ ಬಂದಿದ್ದರು. ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂರು ಬಾರಿ ಒಡಿಶಾ ಮುಖ್ಯಮಂತ್ರಿಯಾಗಿದ್ದ ಅವರು ಅಸ್ಸಾಂನ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.

ಒಡಿಶಾ ರಾಜ್ಯಪಾಲ ಎಸ್‌.ಸಿ.ಜಮೀರ್‌,  ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಸಂತಾಪ ಸೂಚಿಸಿದ್ದಾರೆ. ಮೃತರ ಗೌರವಾರ್ಥ ಒಡಿಶಾದಲ್ಲಿ ಒಂದು ವಾರ ಶೋಕಾಚರಣೆ ಘೋಷಿಸಲಾಗಿದೆ.  ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿತ್ತು.

ಪತ್ರಕರ್ತರಾಗಿ ವೃತ್ತಿ ಆರಂಭ: 1952ರಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು, ಸ್ಥಳೀಯವಾಗಿ ಜನಪ್ರಿಯವಾಗಿ ‘ಪ್ರಜಾತಂತ್ರ’ ಪತ್ರಿಕೆಯಲ್ಲಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.

1960ರಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿ 1971ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1973ರಿಂದ 80ರವರೆಗೆ ಇಂದಿರಾಗಾಂಧಿ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಅವರು  1980ರಿಂದ 89ರವರೆಗೆ ಹಾಗೂ 1995ರಿಂದ 99ರವರೆಗೆ ಒಡಿಶಾ ಮುಖ್ಯಮಂತ್ರಿಯಾಗಿದ್ದರು. 2009ರಲ್ಲಿ ಅಸ್ಸಾಂನ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಅವರ ಅಧಿಕಾರ ಅವಧಿ ಕಳೆದ ಡಿಸೆಂಬರ್‌ನಲ್ಲಿ ಮುಕ್ತಾಯವಾಗಿತ್ತು.

ಅಪಾರ ಪಾಂಡಿತ್ಯ: ನಾಲ್ಕು ದಶಕಗಳ ಕಾಲ ರಾಜಕೀಯ ಜೀವನದಲ್ಲಿದ್ದ ಅವರು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ರಾಜಕೀಯ ಕ್ಷೇತ್ರದ ಜೊತೆಗೆ ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.

ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಿಶಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.

ಮಹಾಭಾರತ, ರಾಮಾಯಣ, ಭಗವದ್ಗೀತೆ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಒಡಿಶಾಗೆ ಭಾಷಾಂತರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.