ADVERTISEMENT

'ಒನ್‌ ಇಂಡಿಯನ್ ಗರ್ಲ್‌' ಬರೆದ ಚೇತನ್ ಭಗತ್ ಕೃತಿ ಚೌರ್ಯ ಮಾಡಿದರೇ?

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 13:17 IST
Last Updated 25 ಏಪ್ರಿಲ್ 2017, 13:17 IST
'ಒನ್‌ ಇಂಡಿಯನ್ ಗರ್ಲ್‌' ಬರೆದ ಚೇತನ್ ಭಗತ್ ಕೃತಿ ಚೌರ್ಯ ಮಾಡಿದರೇ?
'ಒನ್‌ ಇಂಡಿಯನ್ ಗರ್ಲ್‌' ಬರೆದ ಚೇತನ್ ಭಗತ್ ಕೃತಿ ಚೌರ್ಯ ಮಾಡಿದರೇ?   

ನವದೆಹಲಿ: ಜನಪ್ರಿಯ ಲೇಖಕ ಚೇತನ್ ಭಗತ್ ಅವರು ಕೃತಿ ಚೌರ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚೇತನ್ ಭಗತ್ ಅವರು ಬರೆದ 'ಒನ್ ಇಂಡಿಯನ್ ಗರ್ಲ್' ನನ್ನ ಕೃತಿಯ ನಕಲು ಎಂದು ಅನ್ವಿತಾ ಬಾಜಪೇಯಿ ಎಂಬ ಲೇಖಕಿ ಆರೋಪಿಸಿದ್ದಾರೆ.

ಲೈಫ್, ಓಡ್ಸ್ ಆ್ಯಂಡ್ ಎಂಡ್ಸ್ ಎಂಬ ಕಥಾ ಸಂಗ್ರಹದಲ್ಲಿರುವ 'ಡ್ರಾಯಿಂಗ್ ಪ್ಯಾರಲಲ್ಸ್' ಎಂಬ ಕಥೆಯ ಕಥಾಪಾತ್ರಗಳನ್ನು, ಸ್ಥಳಗಳನ್ನು ಮತ್ತು ಕೆಲವೊಂದು ವಿಚಾರಧಾರೆಗಳನ್ನೇ ಚೇತನ್ ಭಗತ್ ಅವರು ನಕಲು ಮಾಡಿದ್ದಾರೆ ಎಂದು ಅನ್ವಿತಾ ವಾದಿಸುತ್ತಿದ್ದಾರೆ.

2014ರಲ್ಲಿ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಬಂದಿದ್ದ ಚೇತನ್ ಭಗತ್ ಅವರಿಗೆ 'ಡ್ರಾಯಿಂಗ್ ಪ್ಯಾರಲಲ್ಸ್'  ಪ್ರತಿ ನೀಡಿ ಆ ಕಥೆ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವಂತೆ ಅನ್ವಿತಾ ಹೇಳಿದ್ದರು.

ADVERTISEMENT

2016 ಅಕ್ಟೋಬರ್ ತಿಂಗಳಲ್ಲಿ ಒನ್ ಇಂಡಿಯನ್ ಗರ್ಲ್ ಪ್ರಕಟವಾಗಿತ್ತು. ಈ ಪುಸ್ತಕದ ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸಿ, ತನಗೆ 5 ಲಕ್ಷ ಪರಿಹಾರ ನೀಡಬೇಕೆಂದು ಕಳೆದ ಫೆಬ್ರವರಿ 22 ರಂದು ಅನ್ವಿತಾ ಅವರು ಚೇತನ್ ಅವರಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದರು.

ಏತನ್ಮಧ್ಯೆ,ಆರೋಪವನ್ನು ಚೇತನ್ ನಿರಾಕರಿಸಿದ್ದ ಕಾರಣ, ಅನ್ವಿತಾ ಅವರು ಬೆಂಗಳೂರಿನ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದಾಗಿ 6 ತಿಂಗಳುಗಳ ಕಾಲ ಪುಸ್ತಕದ ಮಾರಾಟವನ್ನು ಸ್ಥಗಿತಗೊಳಿಸುವಂತೆ ಕೋರ್ಟ್ ಆದೇಶ ನೀಡಿತ್ತು.

ಚೇತನ್ ಭಗತ್ ಅವರು ಕೃತಿ ಚೌರ್ಯ ಮಾಡಿದ್ದಾರೆ ಎಂದು ಅನ್ವಿತಾ ಅವರು ನಿನ್ನೆ ಫೇಸ್‍ಬುಕ್‍ನಲ್ಲಿ ಪೋಸ್ಟ್  ಹಾಕಿದ್ದರು. ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ  ಚೇತನ್,  ತಾನು ಅನ್ವಿತಾ ಅವರ ಯಾವುದೇ ಪುಸ್ತಕವನ್ನು ಓದಿಲ್ಲ. ಒನ್ ಇಂಡಿಯನ್ ಗರ್ಲ್ ನನ್ನ ಸ್ವಂತ ಕೃತಿ ಎಂದು ಹೇಳಿದ್ದಾರೆ.

ಚೇತನ್ ವಿರುದ್ಧ ಕೃತಿ  ಚೌರ್ಯ ಆರೋಪ ಬಂದಿರುವುದು ಹೊಸತೇನೂ ಅಲ್ಲ. ಈ ಹಿಂದೆ ಹಾಫ್ ಗರ್ಲ್ ಫ್ರೆಂಡ್  ಕೃತಿ ಕೂಡಾ ಕೃತಿ ಚೌರ್ಯ ಮಾಡಿಯೇ ಬರೆದಿದ್ದಾರೆ ಎಂದು ಪಟ್ನಾ ಮೂಲದ ವ್ಯಕ್ತಿಯೊಬ್ಬರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.