ADVERTISEMENT

ಕಡಲ್ಗಳ್ಳರಿಂದ ಹಡಗು ರಕ್ಷಿಸಿದ ನೌಕಾಪಡೆ

ಪಿಟಿಐ
Published 9 ಏಪ್ರಿಲ್ 2017, 20:05 IST
Last Updated 9 ಏಪ್ರಿಲ್ 2017, 20:05 IST
ಕಡಲ್ಗಳ್ಳರಿಂದ ಹಡಗು ರಕ್ಷಿಸಿದ ನೌಕಾಪಡೆ
ಕಡಲ್ಗಳ್ಳರಿಂದ ಹಡಗು ರಕ್ಷಿಸಿದ ನೌಕಾಪಡೆ   

ನವದೆಹಲಿ: ಏಡನ್‌ ಕೊಲ್ಲಿಯಲ್ಲಿ ಸೊಮಾಲಿಯಾದ ಕಡಲ್ಗಳ್ಳರು ಅಪಹರಿಸಿದ ಸರಕು ಸಾಗಣೆ ಹಡಗೊಂದನ್ನು ಭಾರತ ಮತ್ತು ಚೀನಾದ ಯುದ್ಧ ನೌಕೆಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ.

ಹಲವು ವಿಚಾರಗಳಿಗೆ ಸಂಬಂಧಿಸಿ ಭಾರತ–ಚೀನಾ ನಡುವೆ ಸಂಘರ್ಷಾತ್ಮಕ ಸ್ಥಿತಿಯ ನಡುವೆಯೇ ಎರಡೂ ದೇಶಗಳ ನೌಕೆಗಳು ಜತೆಯಾಗಿ ಕಾರ್ಯಾಚರಣೆ ನಡೆಸಿವೆ.

ಕಡಲ್ಗಳ್ಳರು ಹಡಗು ಅಪಹರಿಸಿದ್ದಾರೆ ಎಂಬ ಅಪಾಯದ ಸಂದೇಶ ಒಎಸ್‌ 35 ಎಂಬ ಹಡಗಿನಿಂದ ಶನಿವಾರ ರಾತ್ರಿ ಬಂದಿತ್ತು. ತಕ್ಷಣ ಸ್ಪಂದಿಸಿದ ಭಾರತದ ನೌಕಾಪಡೆ ಐಎನ್‌ಎಸ್‌ ಮುಂಬೈ ಮತ್ತು ಐಎನ್‌ಎಸ್‌ ತರ್ಕಶ್‌ ನೌಕೆಗಳನ್ನು ಕಳುಹಿಸಿತು. ಚೀನಾ ನೌಕಾಪಡೆ ಕೂಡ ತನ್ನ ಯೂಲಿನ್‌ ಎಂಬ ನೌಕೆಯನ್ನು ಕಳುಹಿಸಿತು.

ಭಾರತದ ಎರಡೂ ನೌಕೆಗಳು ಸಾಗರೋತ್ತರ ನಿಯೋಜನೆಯ ಭಾಗವಾಗಿ ಈ ಪ್ರದೇಶದಲ್ಲಿ ಇದ್ದವು. ಸರಕು ಸಾಗಾಟದ ಹಡಗು ಮಲೇಷ್ಯಾದ ಕೆಲಾಂಗ್‌ನಿಂದ ಯೆಮನ್‌ನ ಏಡನ್‌ ಬಂದರಿನತ್ತ ಸಾಗುತ್ತಿತ್ತು. ಹಡಗಿನಲ್ಲಿದ್ದ 19 ಸಿಬ್ಬಂದಿ ಫಿಲಿಪ್ಪೀನ್ಸ್‌ನವರು. ಕಡಲ್ಗಳ್ಳರ ದಾಳಿಯ ಸಂದರ್ಭದಲ್ಲಿ ಅವರೆಲ್ಲರೂ ಹಡಗಿನ ಸುರಕ್ಷಿತ ಕೊಠಡಿಯೊಂದರಲ್ಲಿ ಕುಳಿತು ಒಳಗಿನಿಂದ ಬಾಗಿಲು ಭದ್ರಪಡಿಸಿಕೊಂಡಿದ್ದರು.

ಭಾರತದ ನೌಕಾಪಡೆ ಹೆಲಿಕಾಪ್ಟರೊಂದನ್ನು ನಿಯೋಜಿಸಿತು. 18 ಸಿಬ್ಬಂದಿಯಿದ್ದ ಚೀನಾದ ನೌಕೆ 178 ಮೀಟರ್‌ ಉದ್ದದ ಸರಕು ಸಾಗಾಟ ಹಡಗಿನ ಶೋಧ ನಡೆಸಿ ಕಡಲ್ಗಳ್ಳರು ಅಡಗಿಕೊಂಡಿಲ್ಲ ಎಂಬುದನ್ನು ಖಾತರಿಪಡಿಸಿತು.

ಕಾರ್ಯಾಚರಣೆಯ ಕೊನೆಯಲ್ಲಿ ಚೀನಾದ ನೌಕಾಪಡೆ ಭಾರತ ನೌಕಾಪಡೆಗೆ ಕೃತಜ್ಞತೆ ಅರ್ಪಿಸಿತು. ಚೀನಾದ ನೆರವಿಗೆ ಭಾರತದ ನೌಕಾಪಡೆಯೂ ವಂದನೆ ಅರ್ಪಿಸಿತು.

ಬ್ರಿಟನ್‌ನ ಮ್ಯಾರಿಟೈಮ್‌ ಟ್ರೇಡ್‌ ಆರ್ಗನೈಸೇಷನ್‌ನ ದುಬೈ ಕಚೇರಿಯು ನೆರವಿಗಾಗಿ ಭಾರತದ ನೌಕಾಪಡೆಯನ್ನು ಸಂಪರ್ಕಿಸಿತ್ತು. ಈ ಪ್ರದೇಶದಲ್ಲಿ ಸಂಚರಿಸುವ ಹಡಗುಗಳ ಮೇಲೆ ನಿಗಾ ಇರಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತದೆ. ಸಂಕಷ್ಟದ ಸಂದರ್ಭದಲ್ಲಿ ವಿವಿಧ ದೇಶಗಳ ಸೇನೆಗಳನ್ನು ಸಂಪರ್ಕಿಸುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತದೆ. ಪಾಕಿಸ್ತಾನ ಮತ್ತು ಇಟಲಿಯ ಯುದ್ಧ ನೌಕೆಗಳು ಕೂಡ ನೆರವಿನ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಧಾವಿಸಿದ್ದವು.

ಕಾರ್ಯಾಚರಣೆ ಹೇಗೆ: ಭಾರತದ ನೌಕೆಗಳ ಸಿಬ್ಬಂದಿ ಸರಕು ಸಾಗಾಟ ಹಡಗಿನ ಕ್ಯಾಪ್ಟನ್‌ ಜತೆ ಸಂಪರ್ಕ ಸಾಧಿಸಿದರು. ಆ ಹೊತ್ತಿಗೆ ಅವರೆಲ್ಲರೂ  ಸುರಕ್ಷಿತ ಕೊಠಡಿಯಲ್ಲಿ ಬಾಗಿಲು ಹಾಕಿ ಕುಳಿತಿದ್ದರು. ಕಡಲ್ಗಳ್ಳರ ದಾಳಿ ಸಂದರ್ಭದಲ್ಲಿ ಸುರಕ್ಷಿತ ಕೊಠಡಿಯಲ್ಲಿ ಕುಳಿತುಕೊಳ್ಳುವುದು ನಿಯಮ.

ಭಾರತದ ಹೆಲಿಕಾಪ್ಟರ್‌ ರಾತ್ರಿಯಿಡೀ ಹಡಗಿನ ಮೇಲಿನಿಂದ ವೈಮಾನಿಕ ಪರಿಶೀಲನೆ ನಡೆಸಿತು. ಸೂರ್ಯೋದಯ ಆಗುತ್ತಿದ್ದಂತೆಯೇ ಹಡಗಿನಲ್ಲಿ ಕಡಲ್ಗಳ್ಳರು ಅಡಗಿದ್ದಾರೆಯೇ ಎಂಬ ಪರಿಶೀಲನೆ ನಡೆಸಲಾಯಿತು.

ಭಾರತ ಮತ್ತು ಚೀನಾದ ಯುದ್ಧನೌಕೆಗಳು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಕಡಲ್ಗಳ್ಳರು ಪರಾರಿಯಾಗಿದ್ದರು. ಮುಂಜಾನೆಯ ಹೊತ್ತಿಗೆ ಇಡೀ ಕಾರ್ಯಾಚರಣೆ ಪೂರ್ಣಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT