ADVERTISEMENT

ಕಲ್ಲಿದ್ದಲು ನಿಕ್ಷೇಪ ಮರುಹರಾಜಿಗೆ ಸಮ್ಮತಿ

ಸುಪ್ರೀಂಕೋರ್ಟ್‌ ಮುಂದೆ ಕೇಂದ್ರದ ಸ್ಪಷ್ಟ ನಿಲುವು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ನವದೆಹಲಿ: ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿರುವ 200ಕ್ಕೂ ಹೆಚ್ಚು ಕಲ್ಲಿದ್ದಲು ನಿಕ್ಷೇಪಗಳನ್ನು ಮರುಹಂಚಿಕೆ ಮಾಡಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ನ್ಯಾಯಾಲಯಕ್ಕೆ  ತಿಳಿಸಿದೆ.

ಆದರೆ, ಈಗಾಗಲೇ ಗಣಿಗಾರಿಕೆ ಆರಂಭವಾಗಿ ವಿದ್ಯುತ್‌ ಸ್ಥಾವರ, ಉಕ್ಕು, ಕಬ್ಬಿಣ ಕಾರ್ಖಾನೆಗಳಿಗೆ ಕಲ್ಲಿದ್ದಲು ಪೂರೈಸುತ್ತಿರುವ 46 ಗಣಿಗಳ ವಿಚಾರ­ದಲ್ಲಿ ಮಾತ್ರ ಯಥಾಸ್ಥಿತಿ ಕಾಪಾಡಿಕೊಳ್ಳುವುದಾಗಿ ಹೇಳಿದೆ.

ಮುಖ್ಯನ್ಯಾಯಮೂರ್ತಿ ಆರ್‌. ಎಂ ಲೋಧಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಕೇಂದ್ರದ ನಿಲುವು ಸ್ಪಷ್ಟಪಡಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ಆಗಸ್ಟ್‌ 25ರಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿಸಿದರು.

1993ರ ನಂತರ  ಮಾಡಿರುವ ಎಲ್ಲ ನಿಕ್ಷೇಪಗಳ ಹಂಚಿಕೆಯನ್ನು ಕೋರ್ಟ್‌ ರದ್ದುಪಡಿಸಿದಲ್ಲಿ ಸರ್ಕಾ­ರದ ಆಕ್ಷೇಪವೇನೂ ಇಲ್ಲ ಎಂದೂ ರೋಹಟಗಿ ಹೇಳಿದರು.

‘1993ರ ನಂತರ ಹಂಚಿಕೆ ಮಾಡಲಾದ 218 ನಿಕ್ಷೇಪಗಳ ಪೈಕಿ ಈಗಾಗಲೇ 80 ನಿಕ್ಷೇಪಗಳ ಹಂಚಿಕೆ ರದ್ದುಪಡಿಸಲಾಗಿದೆ. ಇನ್ನುಳಿದ 138 ನಿಕ್ಷೇಪಗಳಲ್ಲಿ 40ರಲ್ಲಿ ಈಗಾಗಲೇ ಗಣಿಗಾರಿಕೆ ಆರಂಭವಾಗಿದೆ. ವಿದ್ಯುತ್‌ ಸ್ಥಾವರ, ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ­ಗಳಿಗೆ ಇವು ಕಲ್ಲಿದ್ದಲು ಪೂರೈಸುತ್ತಿವೆ. ಇನ್ನುಳಿದ 6 ನಿಕ್ಷೇಪಗಳಲ್ಲಿ ಇನ್ನೆರಡು ತಿಂಗಳಲ್ಲಿ ಗಣಿಗಾರಿಕೆ ಆರಂಭವಾಗಲಿದೆ.

‘ಈಗಾಗಲೇ ಕಲ್ಲಿದ್ದಲು ಗಣಿಗಾರಿಕೆ ಆರಂಭಿಸಿದ­ವರು ಅಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳ­ಬೇಕು. ಆದರೆ, ಅವರು ಸರ್ಕಾರಕ್ಕೆ ನಷ್ಟವಾಗದಂತೆ ಹೊಸದಾಗಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

‘ದೇಶದಲ್ಲಿ ವಿದ್ಯುತ್‌ ಕೊರತೆ ತೀವ್ರವಾಗಿದೆ. ಕಲ್ಲಿ­ದ್ದಲು ಪೂರೈಕೆ ಕಡಿಮೆಯಾಗಿದೆ ಹಾಗೂ ಅನಿಲದ ಕೊರತೆಯೂ ಇದೆ. ಹಾಗಾಗಿ ಈ ವಿವಾದವನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ ಕೋರ್ಟ್‌ ಇಚ್ಛಿಸಿ­ದಲ್ಲಿ ನಿಕ್ಷೇಪಗಳನ್ನು ಮರುಹಂಚಿಕೆ ಮಾಡಲು ಸರ್ಕಾರ ಸಿದ್ಧವಿದೆ’ ಎಂದು ರೋಹಟಗಿ ತಿಳಿಸಿದರು.

ನಿಕ್ಷೇಪಗಳ ಮರುಹಂಚಿಕೆ ಬಗ್ಗೆ ಪರಾಮರ್ಶೆ ಮಾಡಲು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸ­ಬಹುದಾಗಿದೆ ಎಂಬ ಸುಪ್ರೀಂಕೋರ್ಟ್‌ ಸಲಹೆ­ಯನ್ನು ಕೇಂದ್ರ ತಿರಸ್ಕರಿಸಿತು.

‘ನಮಗೆ ಯಾವುದೇ ಸಮಿತಿ ಬೇಕಿಲ್ಲ. ಎಲ್ಲ ನಿಕ್ಷೇಪ­ಗಳ ಹಂಚಿಕೆ ರದ್ದುಗೊಳಿಸಬೇಕು ಎಂದಾದಲ್ಲಿ ಎಲ್ಲವೂ ರದ್ದಾಗಬೇಕು. ನನ್ನ ನಿಲುವೇ ಸರ್ಕಾರದ ನಿಲುವು ಸಹ ಆಗಿದೆ’ ಎಂದು ರೋಹಟಗಿ ಸ್ಪಷ್ಟಪಡಿಸಿ­ದರು. ರೋಹಟಗಿ ಮತ್ತು ಇತರ ವಕೀಲರ­ವಾದ ಆಲಿ­ಸಿದ ನ್ಯಾಯಪೀಠ ಸೆಪ್ಟೆಂಬರ್‌ 8ರೊಳಗೆ ಪ್ರಮಾಣ­ಪತ್ರ ಸಲ್ಲಿಸುವಂತೆ ಸೂಚಿಸಿತು. ವಿಚಾರಣೆ­ಯನ್ನು ಸೆಪ್ಟೆಂಬರ್‌ 9ಕ್ಕ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.