ADVERTISEMENT

ಕಾಂಗ್ರೆಸ್‌ಗೆ ಆಘಾತ: ಪುನಶ್ಚೇತನವೂ ಕಷ್ಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾ­ನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲಿನಿಂದ ಕಾಂಗ್ರೆಸ್‌ ಕಂಗೆಟ್ಟಿದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಭದ್ರಕೋಟೆಗಳು ಛಿದ್ರವಾಗಿ­ರುವು­ದರಿಂದ ಪಕ್ಷದ ಪುನಶ್ಚೇತನ ಪ್ರಯತ್ನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ನಾಯಕತ್ವ ಕೂಡ ಈಗ ಪ್ರಶ್ನೆಗೆ ಒಳಪಟ್ಟಿದೆ. ಇನ್ನೊಂದೆಡೆ ಪ್ರಿಯಾಂಕಾ ಗಾಂಧಿ ಅವರಿಗೆ ಪಕ್ಷದಲ್ಲಿ ಗುರುತರ ಜವಾಬ್ದಾರಿ ಕೊಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ.

ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಈ ದುರ್ಗತಿ ಬರುತ್ತದೆ ಎಂದು ಕಾಂಗ್ರೆಸ್‌ ನಾಯಕರು ಯಾರೂ ಊಹಿಸಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡೂ ರಾಜ್ಯ­ಗಳಲ್ಲಿ ಸುಮಾರು ೩೫ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದರು. ಆದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್‌ ಗಾಂಧಿ ಕೆಲವೇ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು.

ಈ ಎರಡೂ ರಾಜ್ಯಗಳಲ್ಲಿ ಮತ್ತೆ ನೆಲೆ ಕಂಡುಕೊಳ್ಳುವ ಶಕ್ತಿ ಪಕ್ಷಕ್ಕೆ  ಇಲ್ಲ ಎನ್ನುವುದು ಕಾಂಗ್ರೆಸ್‌ಗೆ ಕಳವಳಕಾರಿ ಸಂಗತಿ. ಮಧ್ಯಪ್ರದೇಶ, ಛತ್ತೀಸಗಡ ಹಾಗೂ ಗುಜರಾತ್‌ನಲ್ಲಿ ಕೂಡ ಕಾಂಗ್ರೆಸ್‌ ಬೇರುಗಳು ಶಿಥಿಲಗೊಂಡಿವೆ. ‘ಎನ್‌ಡಿಎ ಈಗಲೂ ಲೋಕ­­ಸಭೆ ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದ್ದರಿಂದ ಅಲ್ಪಾವಧಿ­ಯಲ್ಲಿ ಕಾಂಗ್ರೆಸ್‌ ಪಕ್ಷದ ಪುನಶ್ಚೇತನ ಕಷ್ಟವಾಗು­ತ್ತದೆ’ ಎನ್ನುತ್ತಾರೆ ಹಿರಿಯ ನಾಯಕರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.