ADVERTISEMENT

‘ಕಾಂಗ್ರೆಸ್‌ ಕೈಗೂ ಮುಸ್ಲಿಮರ ರಕ್ತದ ಕಲೆ’

ಪಿಟಿಐ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST
ಸಲ್ಮಾನ್‌ ಖುರ್ಷಿದ್‌
ಸಲ್ಮಾನ್‌ ಖುರ್ಷಿದ್‌   

ಅಲಿಗಡ (ಉತ್ತರ ಪ್ರದೇಶ): ‘ಕಾಂಗ್ರೆಸ್‌ ಕೈಗೂ ಮುಸ್ಲಿಮರ ರಕ್ತದ ಕಲೆಗಳು ಅಂಟಿವೆ’ ಎಂದು ಪಕ್ಷದ ಹಿರಿಯ ಮುಖಂಡ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭಾನುವಾರ ಖುರ್ಷಿದ್‌ ನೀಡಿದ ಈ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ.

‘ಕೋಮು ದಂಗೆಗಳನ್ನು ಹುಟ್ಟು ಹಾಕುವ ಕಾಂಗ್ರೆಸ್‌ ಇತಿಹಾಸಕ್ಕೆ ಸಲ್ಮಾನ್‌ ಒಪ್ಪಿಗೆಯ ಅಧಿಕೃತ ಮುದ್ರೆ ಹಾಕಿದ್ದಾರೆ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ADVERTISEMENT

‘ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಏನು ಹೇಳಬೇಕಾಗಿತ್ತೋ ಅದನ್ನು ಹೇಳಿಯಾಗಿದೆ’ ಎಂದು ಖುರ್ಷಿದ್‌ ಸಮರ್ಥಿಸಿಕೊಂಡಿದ್ದಾರೆ.

‘ಕಾಂಗ್ರೆಸ್ಸಿಗನಾಗಿ ನಾನು ಈ ಹೇಳಿಕೆ ನೀಡಿಲ್ಲ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಸಿಖ್‌ ನರಮೇಧ ಮತ್ತು ಬಾಬರಿ ಮಸೀದಿ ಧ್ವಂಸದ ಕಳಂಕವನ್ನು ಕಾಂಗ್ರೆಸ್‌ ಹೇಗೆ ತೊಳೆದುಕೊಳ್ಳುತ್ತದೆ ಎಂದು ಅಲಿಗಡ ಮುಸ್ಲಿಂ ವಿ.ವಿಯವಿದ್ಯಾರ್ಥಿಗಳು ಖುರ್ಷಿದ್‌ ಅವರನ್ನು ಪ್ರಶ್ನಿಸಿದ್ದರು.

‘ನಮ್ಮ ಕೈಗೆ ರಕ್ತದ ಕಲೆಗಳು ಅಂಟಿರುವುದು ನಿಜ. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಮುಂದೊಂದು ದಿನ ಅಂತಹ ಕಲೆಗಳು ನಿಮ್ಮ ಕೈಗೂ ಅಂಟದಿರಲಿ ಎಂಬುದು ನಮ್ಮ ಉದ್ದೇಶ’ ಎಂದು ಅವರು ಹೇಳಿದ್ದರು.

ಕಳಚಿಬಿದ್ದ ಜಾತ್ಯತೀತ ಮುಖವಾಡ: ಬಿಜೆಪಿ

ಕಾಂಗ್ರೆಸ್‌ ತೊಟ್ಟಿದ್ದ ಜಾತ್ಯತೀತ ಮುಖವಾಡ ಕಳಚಿ ಬಿದ್ದಿದೆ ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಜಾತ್ಯತೀತ ಮುಖವಾಡ ತೊಟ್ಟ ಕಾಂಗ್ರೆಸ್‌ ಆಂತರ್ಯದಲ್ಲಿ ಕೋಮುವಾದಿಯಾಗಿದೆ. ಈಗಲಾದರೂ ಜನರು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಹೇಳಿದ್ದಾರೆ.

ಮತಕ್ಕಾಗಿ ಜನರನ್ನು ಒಡೆಯುವ ಮತ್ತು ಆತಂಕ ಸೃಷ್ಟಿಸುವ ತನ್ನ ಭವ್ಯ ರಾಜಕೀಯ ಸಂಪ್ರದಾಯವನ್ನು ಕಾಂಗ್ರೆಸ್‌ ಮುಂದುವರಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಈ ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಕೋಮು ಗಲಭೆ, ಹಿಂಸಾಚಾರಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

**

ಹೌದು,ನಮ್ಮ ಕೈಗೆ ಮುಸ್ಲಿಮರ ರಕ್ತದ ಕಲೆ ಅಂಟಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್‌ ಪಕ್ಷದ ಸದಸ್ಯನಾಗಿ ನನಗೆ ಯಾವುದೇ ಹಿಂಜರಿಕೆ ಇಲ್ಲ. ಆ ರಕ್ತದ ಕಲೆಗಳು ನಿಮ್ಮ ಕೈಗೆ ಅಂಟುವುದು ಬೇಡ
– ಸಲ್ಮಾನ್‌ ಖುರ್ಷಿದ್‌ , ಕಾಂಗ್ರೆಸ್‌ ಮುಖಂಡ

**

ಕೋಮುದಂಗೆ, ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಭವ್ಯ ಇತಿಹಾಸವಿದೆ. ಅದಕ್ಕೆ ಈಗ ಖುರ್ಷಿದ್‌ ಅಧಿಕೃತ ಮುದ್ರೆ ಒತ್ತಿದ್ದಾರೆ
ಮುಖ್ತಾರ್‌ ಅಬ್ಬಾಸ್‌ ನಕ್ವಿ, ಬಿಜೆಪಿ ಮುಖಂಡ

**

ಯಾವುದೇ ಕಾರಣಕ್ಕೂ ಸಲ್ಮಾನ್‌ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ
ಪಿ.ಎಲ್‌. ಪುನಿಯಾ,  ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.