ADVERTISEMENT

ಕಾಮತೃಷೆ ತಣಿಸಲು ತ್ರಿವಳಿ ತಲಾಖ್ ಬಳಕೆ: ಉತ್ತರಪ್ರದೇಶ ಸಚಿವ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಮೌರ್ಯ
ಮೌರ್ಯ   

ಬಸ್ತಿ (ಉತ್ತರಪ್ರದೇಶ): ‘ತಮ್ಮ ಕಾಮ ತೃಷೆಯನ್ನು ತಣಿಸಲಿಕ್ಕಾಗಿ ಹೆಂಡತಿಯನ್ನು ಬದಲಿಸಲು ತಲಾಖ್‌ ಅನ್ನು ಮುಸ್ಲಿಂ ಪುರುಷರು ಬಳಸಿಕೊಳ್ಳುತ್ತಿದ್ದಾರೆ’ ಎಂದು ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.  

ತಲಾಖ್‌ಗೆ ಯಾವುದೇ ಆಧಾರ ಇಲ್ಲ. ಅದನ್ನು ಸರಿ ಎಂದು ಯಾರೂ ಹೇಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಇಲ್ಲಿನ ಮುಖಂಡರೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮದ ನಂತರ ಪತ್ರಕರ್ತರ ಜತೆ ಮೌರ್ಯ ಮಾತನಾಡಿದ್ದಾರೆ. ಆಗ, ‘ತ್ರಿವಳಿ ತಲಾಖ್ ನೀಡುವ ಮೂಲಕ ಮುಸ್ಲಿಮರು, ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಬೀದಿಗೆ ತಳ್ಳುತ್ತಾರೆ. ಭಿಕ್ಷೆ ಬೇಡುವಂತೆ ಮಾಡುತ್ತಾರೆ. ಇಂಥದ್ದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ಮೌರ್ಯ ಅವರ ಹೇಳಿಕೆಗೆ ರಾಜಕೀಯ ನಾಯಕರು, ಸಂಘಟನೆಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಟ್ವಿಟರ್‌ನಲ್ಲೂ ಈ ಹೇಳಿಕೆಗೆ ವ್ಯಾಪಕ ಬೆಂಬಲ ಮತ್ತು ವಿರೋಧ ಎರಡೂ ವ್ಯಕ್ತವಾಗಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ‘ಮೌರ್ಯ ಅವರು ಬೇಷರತ್ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದೆ.

ಉತ್ತರ ಪ್ರದೇಶದ ಬಿಜೆಪಿ ಘಟಕವು, ಮೌರ್ಯ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಜತೆಗೆ, ‘ನಾವು ತ್ರಿವಳಿ ತಲಾಖ್ ಅನ್ನು ವಿರೋಧಿಸುತ್ತೇವೆ ಮತ್ತು ನಮ್ಮ ಮುಸ್ಲಿಂ ಸೋದರಿಯರ ಜತೆಗಿದ್ದೇವೆ’ ಎಂದಷ್ಟೇ ಹೇಳಿದೆ.

* ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೌರ್ಯ ಅವರನ್ನು ತಮ್ಮ ಸಂಪುಟದಿಂದ ಕಿತ್ತೊಗೆದು, ಚಿಕಿತ್ಸೆಗಾಗಿ ಮಾನಸಿಕ ರೋಗಿಗಳ ಆಸ್ಪತ್ರೆಗೆ ಕಳುಹಿಸಬೇಕು
–ಶಾಯಿಸ್ತಾ ಅಂಬರ್, ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷೆ

* ಸಚಿವ ಮೌರ್ಯ ಅವರ ಹೇಳಿಕೆ, ಅವರ ಕೀಳುಮಟ್ಟದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ
ಅಜಂ ಖಾನ್, ಸಮಾಜವಾದಿ ಪಕ್ಷದ ನಾಯಕ

* ಮೌರ್ಯ ಅವರು ಸತ್ಯವನ್ನೇ ಹೇಳಿದ್ದಾರೆ. ಮುಸ್ಲಿಂ ಪುರುಷರು ತಲಾಖ್ ನೀಡಿದ ಕೆಲವೇ ದಿನಗಳಲ್ಲಿ ಮತ್ತೊಂದು ಮದುವೆ ಆಗುವುದಾದರೂ ಏತಕ್ಕೆ?
–@newAkhandBharat

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.