ADVERTISEMENT

ಕೊನೆಗೂ ವಿಶಾಲ್‌ ಕೃಷ್ಣ ನಾಮಪತ್ರ ತಿರಸ್ಕರಿಸಿದ ಚುನಾವಣಾ ಆಯೋಗ

ಆರ್‌.ಕೆ. ನಗರ ಉಪ ಚುನಾವಣೆ

ಏಜೆನ್ಸೀಸ್
Published 6 ಡಿಸೆಂಬರ್ 2017, 6:13 IST
Last Updated 6 ಡಿಸೆಂಬರ್ 2017, 6:13 IST
ವಿಶಾಲ್‌ ಕೃಷ್ಣ
ವಿಶಾಲ್‌ ಕೃಷ್ಣ   

ಚೆನ್ನೈ: ಆರ್‌.ಕೆ. ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಟ ವಿಶಾಲ್‌ ಕೃಷ್ಣ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ಕೊನೆಗೂ ತಿರಸ್ಕರಿಸಿದೆ.

ವಿಶಾಲ್‌ ನಾಮಪತ್ರಕ್ಕೆ ಹತ್ತು ಮಂದಿ ಅನುಮೋದಕರ ಸಹಿ ಬೇಕಿತ್ತು. ಆದರೆ, ನಾಮಪತ್ರದಲ್ಲಿರುವ ಸಹಿ ತಮ್ಮದಲ್ಲ ಎಂದು ಸುಮತಿ ಮತ್ತು ದೀಪನ್‌ ಎಂಬುವವರು ತಿಳಿಸಿದ್ದರು.

ತಾಂತ್ರಿಕ ಕಾರಣ ಎಂದಷ್ಟೇ ಹೇಳಿ ಮಂಗಳವಾರ ನಟ ವಿಶಾಲ್‌ ಹಾಗೂ ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್‌ ಅವರ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು.

ADVERTISEMENT

ಚುನಾವಣಾ ಆಯೋಗ ನಾಮಪತ್ರ ತಿರಸ್ಕರಿಸಿದನ್ನು ವಿರೋಧಿಸಿ ನಟ ವಿಶಾಲ್‌ ಹಾಗೂ ಅವರ ಬೆಂಬಲಿಗರು ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚುನಾವಣಾ ಆಯೋಗದ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ನಾಮಪತ್ರ ಅಂಗೀಕಾರಗೊಂಡಿದೆ ಎಂದು ಆಯೋಗ ತಿಳಿಸಿತ್ತು. ಆದರೆ, ಅಂತಿಮವಾಗಿ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಕೆ. ವೇಲುಸಾಮಿ ಮಂಗಳವಾರ ರಾತ್ರಿ ತಿಳಿಸಿದ್ದಾರೆ.

‘ಸುಮತಿ ಮತ್ತು ದೀಪನ್‌ ಎಂಬುವರು ಸಹಿ ತಮ್ಮದಲ್ಲ ಎಂದು ಖುದ್ದಾಗಿ ಹೇಳಿಕೆ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸದ ಕಾರಣ ವಿಶಾಲ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ’ ಎಂದು ವೇಲುಸಾಮಿ ತಿಳಿಸಿದ್ದಾರೆ.

‘ಮೊದಲು ನನ್ನ ನಾಮಪತ್ರ ಅಂಗೀಕರಿಸಿ ನಾನು ಚುನಾವಣಾಧಿಕಾರಿ ಕಚೇರಿಯಿಂದ ಹೊರಟ ಬಳಿಕ ಅದನ್ನು ತಿರಸ್ಕರಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. 2016ರ ಡಿಸೆಂಬರ್‌ 5: ಅಮ್ಮನ ಸಾವು, 2017ರ ಡಿಸೆಂಬರ್‌ 5: ಪ್ರಜಾಪ್ರಭುತ್ವದ ಸಾವು’ ಎಂದು ವಿಶಾಲ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.