ADVERTISEMENT

ಖಾನ್‌ತ್ರಯರ ಚಿತ್ರಗಳ ಪೋಸ್ಟರ್‌­ ಸುಟ್ಟು ಹಾಕಿ

ಬಜರಂಗ ದಳ ಕಾರ್ಯಕರ್ತರಿಗೆ ಸಾಧ್ವಿ ಪ್ರಾಚಿ ಕರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಡೆಹ್ರಾಡೂನ್  (ಪಿಟಿಐ): ಬಾಲಿವುಡ್‌ ನಟರಾದ ಶಾರುಕ್‌ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರ ಚಿತ್ರ­ಗಳನ್ನು ಬಹಿಷ್ಕರಿಸಿ ಎಂದು ಬಜರಂಗ­ದಳಕ್ಕೆ ಕರೆ ಕೊಟ್ಟಿರುವ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ, ಖಾನ್‌ತ್ರಯರ ಚಿತ್ರಗಳ ಪೋಸ್ಟರ್‌­ಗಳನ್ನು ಹರಿದು ಬೆಂಕಿಗೆ ಹಾಕಿ ಎಂದಿದ್ದಾರೆ.

ವಿಶ್ವ ಹಿಂದೂ ಪರಿಷತ್ ಇಲ್ಲಿ ಭಾನು­ವಾರ ಆಯೋಜಿಸಿದ್ದ ಕಾರ್ಯ­ಕ್ರಮ­ವೊಂದ­ರಲ್ಲಿ ಮಾತನಾ­ಡಿದ ಅವರು, ‘ಖಾನ್‌ತ್ರಯರ ಚಲನಚಿತ್ರಗಳ ಪೋಸ್ಟ­ರ್‌­ಗ­ಳನ್ನು ಹರಿದು ಸುಟ್ಟು ಹಾಕಿ ಎಂದು ಬಜರಂಗ­ದಳದ ಪ್ರತಿ­ಯೊಬ್ಬ ಸದಸ್ಯ­ರಲ್ಲೂ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

ತಮ್ಮ ಚಲನಚಿತ್ರಗಳ ಮೂಲಕ ಬಾಲಿವುಡ್‌ ತಾರೆಗಳಾದ ಶಾರುಕ್‌ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರು ಹಿಂಸಾ ಸಂಸ್ಕೃತಿ ಹರಡುತ್ತಿದ್ದಾರೆ. ಹೀಗಾಗಿ ಅವ­ರನ್ನು  ಮಾದರಿಯಾಗಿ­ಟ್ಟು­ಕೊಳ್ಳ­ಬೇಡಿ ಎಂದು ಸಾಧ್ವಿ ಪ್ರಾಚಿ ಯುವಜನರಿಗೆ ಕಿವಿಮಾತು ಹೇಳಿದ್ದಾರೆ.

‘ನೀನೇನಾಗಬೇಕು ಎಂದು ಬಾಲಕ­ನೊಬ್ಬನನ್ನು ಮೀರಠ್‌ನಲ್ಲಿ ನಡೆದ ಕಾರ್ಯ­ಕ್ರಮವೊಂದರಲ್ಲಿ ಕೇಳಿದ್ದೆ. ಆತ ತಾನು ಹೃತಿಕ್ ರೋಷನ್, ಶಾರುಕ್‌ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್‌ರಂತೆ ಆಗಬೇಕು ಎಂದು ಹೇಳಿದ. ಅವರಂತೆಯೇ ಏಕೆ ಎಂದು ಕೇಳಿದಾಗ, ಚಿತ್ರ­ಗಳಲ್ಲಿ ಅವರ  ಹೊಡೆದಾಟ (ಸ್ಟಂಟ್‌) ಚೆನ್ನಾಗಿ­ರು­ತ್ತದೆ ಎಂದು ಬಾಲಕನ ತಾಯಿ ಉತ್ತರಿಸಿ­ದರು’ ಎಂದರು.

ಇಂತಹ ಚಿತ್ರಗಳ ಮೂಲಕ ಅವರು ಹಿಂಸಾ ಸಂಸ್ಕೃತಿಯನ್ನು ಹರಡುತ್ತಿದ್ದಾರೆ. ಹೀಗಾಗಿ ಯುವಜನತೆ ಇವರನ್ನು ತಮ್ಮ  ಮಾದರಿಯಾಗಿಟ್ಟುಕೊಳ್ಳಬಾರದು ಎಂದು ಸಾಧ್ವಿ ಕಿವಿಮಾತು ಹೇಳಿದ್ದಾರೆ.

ನಟಿಯರ ವಿರುದ್ಧ ಪಿತೂರಿ
‘ಖಾನ್‌ಗಳು ಹಿಂದೂ ನಟಿಯರಿಗೆ ಆಮಿಷ­ವೊಡ್ಡಿ ಅವರ ವಿರುದ್ಧವೇ ಪಿತೂರಿ ಮಾಡಿ­ದ್ದಾರೆ. ಸಂಗೀತಾ ಬಿಜಲಾನಿ ಜತೆ ಸಲ್ಮಾನ್‌ ಖಾನ್‌ ಸಂಬಂಧವಿಟ್ಟುಕೊಂಡಿದ್ದರು. ಮಲೈಕಾ ಅರೋರಾ ಅವರು ಸಲ್ಮಾನ್‌ ಖಾನ್‌ ಸಹೋದರನ ಪತ್ನಿ, ಅಮೀರ್ ಖಾನ್‌ ಮಾಜಿ ಪತ್ನಿ ರೀನಾ ದತ್ತ ಇಲ್ಲವೇ ಈಗಿನ ಪತ್ನಿ ಕಿರಣ್‌ ರಾವ್‌ ಎಲ್ಲರೂ ಹಿಂದೂಗಳು. ಇವರೆಲ್ಲ ಯಾಕೆ ಹಿಂದೂ ಗಳನ್ನೇ ಆಯ್ಕೆ ಮಾಡಿಕೊಂಡರು. ಯಾಕೆ ಮುಸ್ಲಿಂ ಯುವತಿಯರ ಜತೆ ಸಂಬಂಧ ಹೊಂದಿರಲಿಲ್ಲ’ ಎಂದು ಸಾಧ್ವಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.