ADVERTISEMENT

ಖಾಸಗಿತನದ ರಕ್ಷಣೆ ‘ಸೋಲುತ್ತಿರುವ ಯುದ್ಧ’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2017, 19:30 IST
Last Updated 2 ಆಗಸ್ಟ್ 2017, 19:30 IST
ಖಾಸಗಿತನದ ರಕ್ಷಣೆ ‘ಸೋಲುತ್ತಿರುವ ಯುದ್ಧ’
ಖಾಸಗಿತನದ ರಕ್ಷಣೆ ‘ಸೋಲುತ್ತಿರುವ ಯುದ್ಧ’   

ನವದೆಹಲಿ:  ತಂತ್ರಜ್ಞಾನದ ಕಾಲದಲ್ಲಿ ಖಾಸಗಿತನದ ಪರಿಕಲ್ಪನೆ ‘ಸೋಲುತ್ತಿರುವ  ಯುದ್ಧ’ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್‌, ಖಾಸಗಿತನದ ಹಕ್ಕನ್ನು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಪರಿಗಣಿಸಬಹುದೇ ಎಂಬ ವಿಷಯದ ಬಗೆಗಿನ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದೆ.


ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ, ಮೂರು ವಾರಗಳ ಅವಧಿಯಲ್ಲಿ ಆರು ದಿನಗಳ ಕಾಲ ಇದರ ವಿಚಾರಣೆ ನಡೆಸಿದೆ.


ಖೇಹರ್‌ ಅವರು ಆಗಸ್ಟ್‌ 27ರಂದು ನಿವೃತ್ತರಾಗುವುದರಿಂದ, ಅಂದು ಅಥವಾ ಅದಕ್ಕಿಂತ ಮೊದಲೇ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.
ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಹಿರಿಯ ವಕೀಲರಾದ ಅರವಿಂದ ದಾತಾರ್‌, ಕಪಿಲ್‌ ಸಿಬಲ್‌, ಗೋಪಾಲ್‌ ಸುಬ್ರಮಣಿಯನ್‌, ಶ್ಯಾಮ್‌ ದಿವಾನ್‌, ಆನಂದ್‌ ಗ್ರೋವರ್‌, ಸಿ.ಎಂ. ಸುಂದರಂ ಮತ್ತು ರಾಕೇಶ್‌ ದ್ವಿವೇದಿ ಅವರು ಪರ– ವಿರೋಧವಾಗಿ ವಾದ ಮಂಡಿಸಿದ್ದಾರೆ.

ADVERTISEMENT


ಸಾರ್ವಜನಿಕವಾಗಿ ಲಭ್ಯವಾಗುವ ವೈಯಕ್ತಿಕ ಮಾಹಿತಿಗಳ ರಕ್ಷಣೆಗೆ ಸಮಗ್ರವಾದ ಮಾರ್ಗದರ್ಶಿ ಸೂತ್ರಗಳ ಅಗತ್ಯದ ಇಂಗಿತ ವ್ಯಕ್ತಪಡಿಸಿರುವ ಸಂವಿಧಾನ ಪೀಠ, ‘ಎಲ್ಲವೂ ಅತ್ಯಂತ ವೇಗವಾಗಿ ಪಸರಿಸುವ ಈ ತಂತ್ರಜ್ಞಾನ ಯುಗದಲ್ಲಿ ಖಾಸಗಿತನ ಎನ್ನುವುದು ಅಪ್ರಸ್ತುತವಾಗುತ್ತಿದೆ. ಹಾಗಾಗಿ ಖಾಸಗಿತನದ ಅಂತಸ್ಸಾರವನ್ನು ಉಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದೆ.


‘ಖಾಸಗಿತನ ಎಂಬ ಸೋಲುತ್ತಿರುವ ಯುದ್ಧದಲ್ಲಿ ನಾವು ಹೋರಾಡುತ್ತಿದ್ದೇವೆ. ಮಾಹಿತಿಯನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಇದು ಆತಂಕದ ಪ್ರಮುಖ ಕಾರಣ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.