ADVERTISEMENT

ಖಾಸಗಿ ಸ್ಥಳದಲ್ಲಿ ಅಶ್ಲೀಲತೆ ಅಪರಾಧವಲ್ಲ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2016, 19:30 IST
Last Updated 19 ಮಾರ್ಚ್ 2016, 19:30 IST
ಖಾಸಗಿ ಸ್ಥಳದಲ್ಲಿ ಅಶ್ಲೀಲತೆ  ಅಪರಾಧವಲ್ಲ
ಖಾಸಗಿ ಸ್ಥಳದಲ್ಲಿ ಅಶ್ಲೀಲತೆ ಅಪರಾಧವಲ್ಲ   

ಮುಂಬೈ (ಪಿಟಿಐ): ‘ಖಾಸಗಿ ಸ್ಥಳದಲ್ಲಿ ನಡೆಯುವ ಅಶ್ಲೀಲ ಚಟುವಟಿಕೆಯನ್ನು ಭಾರತೀಯ ದಂಡ ಸಂಹಿತೆಯ 294ನೇ ಕಲಂ ಅಡಿ ಅಪರಾಧವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ಫ್ಲ್ಯಾಟ್‌ ಒಂದರಲ್ಲಿ ಮಹಿಳೆಯರೊಂದಿಗೆ ಅಶ್ಲೀಲ ಚಟುವಟಿಕೆ ನಡೆಸಿದ ಆರೋಪ ಎದುರಿಸುತ್ತಿದ್ದ 13 ಮಂದಿಯ ಮೇಲಿನ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎನ್‌.ಎಚ್. ಪಾಟೀಲ್ ಮತ್ತು ಎ.ಎಂ ಬಾದರ್ ಅವರಿದ್ದ ಪೀಠ ವಜಾ ಮಾಡಿತು.

‘ನಮ್ಮ ಫ್ಲ್ಯಾಟ್‌ನ ಪಕ್ಕದ ಫ್ಲ್ಯಾಟ್‌ನಿಂದ ಜೋರು ದನಿಯಲ್ಲಿ ಸಂಗೀತ ಹಾಕಲಾಗಿದೆ. ಅರೆಬೆತ್ತಲೆಯಾಗಿರುವ ಕೆಲವು ಯುವತಿಯರು ಸಂಗೀತಕ್ಕೆ ನೃತ್ಯ ಮಾಡುತ್ತಿದ್ದು, ಕೆಲವು ಯುವಕರು ಅವರ ಮೇಲೆ ನೋಟುಗಳನ್ನು ಎಸೆಯುತ್ತಿದ್ದಾರೆ’  ಎಂದು ಪತ್ರಕರ್ತರೊಬ್ಬರು 2015ರ ಡಿಸೆಂಬರ್ 12ರಂದು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನು ಆಧರಿಸಿ ಆ ಫ್ಲ್ಯಾಟ್‌ನ ಮೇಲೆ ದಾಳಿ ನಡೆಸಲಾಗಿತ್ತು. ಆಗ ಅರೆಬೆತ್ತಲೆ ಸ್ಥಿತಿಯಲ್ಲಿ ನೃತ್ಯ ಮಾಡುತ್ತಿದ್ದ  ಆರು ಯುವತಿಯರು ಮತ್ತು ಮದ್ಯಪಾನ ಮಾಡಿದ್ದ 13 ಪುರುಷರು ಅಲ್ಲಿದ್ದರು. ಅಷ್ಟೂ ಪುರುಷರನ್ನು ವಶಕ್ಕೆ ಪಡೆದು ಎಫ್‌ಐಆರ್‌ ದಾಖಲಿಸಲಾಗಿತ್ತು. ಅವರ ವಿರುದ್ಧ ಐಪಿಸಿ 294ನೇ ಕಲಂ ಅಡಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ಪೀಠಕ್ಕೆ ವಿವರಣೆ ನೀಡಿದರು.

ಅರ್ಜಿದಾರರ ಪರ ವಕೀಲ ರಾಜೇಂದ್ರ ಶಿರೋಡ್ಕರ್, ‘ಆರೋಪಿಗಳು ಅಶ್ಲೀಲ ಚಟುವಟಿಕೆ ನಡೆಸಿದರು ಎನ್ನಲಾದ ಫ್ಲ್ಯಾಟ್‌ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಅದನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಮಾಡಬೇಕು’ ಎಂದು ವಾದಿಸಿದರು. ಅವರ ವಾದವನ್ನು ಒಪ್ಪಿದ ಪೀಠ, ಎಫ್‌ಐಆರ್‌ ರದ್ದುಪಡಿಸುವಂತೆ ಆದೇಶಿಸಿತು.

ಐಪಿಸಿ 294ನೇ ಕಲಂ
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಅಥವಾ ಅಶ್ಲೀಲವಾಗಿ ವರ್ತಿಸುವುದು ಐಪಿಸಿಯ 294ನೇ ಕಲಂ ಅಡಿ ಅಪರಾಧ. ಜತೆಗೆ ಸಾರ್ವಜನಿಕ ಸ್ಥಳದಲ್ಲಿ ಆಶ್ಲೀಲವಾಗಿ ಮಾತನಾಡುವುದು, ಅವಾಚ್ಯ ಶಬ್ದಗಳನ್ನು ಬಳಸುವುದು, ಅಶ್ಲೀಲವಾದ ಹಾಡುಗಳನ್ನು ಹಾಡುವುದು ಮತ್ತು ಸನ್ನೆ ಮಾಡುವುದನ್ನೂ ಈ ಕಲಂ ಅಡಿ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಕೋರ್ಟ್‌ ಹೇಳಿದ್ದೇನು...
ಫ್ಲ್ಯಾಟ್‌ ಅನ್ನು ಖಾಸಗಿ ಉದ್ದೇಶಕ್ಕಾಗಿಯೇ ಖರೀದಿಸಲಾಗಿರುತ್ತದೆ. ಹೀಗಾಗಿ ಅದನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಐಪಿಸಿಯ 294ನೇ ಕಲಂ ಅಡಿ ಪ್ರಕರಣ ದಾಖಲಿಸಬೇಕಾದರೆ ಅಶ್ಲೀಲ ಅಥವಾ ಇತರರಿಗೆ ಮುಜುಗರ ಉಂಟು ಮಾಡುವಂತಹ ಚಟುವಟಿಕೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆದಿರಬೇಕು. ಒಂದು ಪ್ರದೇಶವು ಸಾರ್ವಜನಿಕ ಸ್ಥಳ ಎನಿಸಿಕೊಳ್ಳಬೇಕಾದರೆ ಸಾರ್ವಜನಿಕರ ಬಳಕೆಗೆ ಅದು ಮೀಸ ಲಾಗಿರಬೇಕು. ಸಾರ್ವಜನಿಕರಿಗೆ ಅಲ್ಲಿ ಮುಕ್ತ ಪ್ರವೇಶವಿರಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.