ADVERTISEMENT

ಗಣಿ ಲಾಬಿಗೆ ಮಣಿದ ಸರ್ಕಾರ!

ರವೀಂದ್ರ ಭಟ್ಟ
Published 23 ಜೂನ್ 2014, 20:30 IST
Last Updated 23 ಜೂನ್ 2014, 20:30 IST

ಬೆಂಗಳೂರು: ಕಲ್ಲು ಗಣಿಗಾರಿಕೆ­ಯಿಂದ ಆಗುತ್ತಿರುವ ರಾಜಧನದ ನಷ್ಟವನ್ನು ತಡೆಯುವ ಗೋಜಿಗೆ ಹೋಗದ ರಾಜ್ಯ ಸರ್ಕಾರ, ಬಜೆಟ್‌ನಲ್ಲಿ ಹೆಚ್ಚಿಸಿದ ರಾಜಧನ ಪ್ರಮಾಣವನ್ನೂ ಕಡಿತ ಮಾಡಿದೆ.

1985ರಿಂದ ರಾಜಧನದ ಪ್ರಮಾಣ ಹೆಚ್ಚಿಸಿರಲಿಲ್ಲ.  ಆದರೆ, ಮುಖ್ಯಮಂತ್ರಿ ಸಿದ್ದ­ರಾಮಯ್ಯ ಈ ವರ್ಷದ ಬಜೆಟ್‌­ನಲ್ಲಿ ಕಲ್ಲು ಗಣಿ ರಾಜಧನ ಏರಿಕೆ ಮಾಡಿದ್ದರು.  ನಂತರ ಗಣಿ ಮಾಲೀಕರ ಒತ್ತ­ಡಕ್ಕೆ ಮಣಿದು ವಾಪಸ್‌ ಪಡೆದಿದ್ದಾರೆ.

ಕಳೆದ ವರ್ಷದವರೆಗೂ ಒಂದು ಘನ ಮೀಟರ್‌ ಕಲ್ಲು ತೆಗೆದರೆ ಅದರ ಗುಣ­ಮಟ್ಟದ ಆಧಾರದಲ್ಲಿ ₨2500 ದಿಂದ ₨ 4 ಸಾವಿರದ ವರೆಗೆ ರಾಜಧನ ಕಟ್ಟ­ಬೇಕಾಗುತ್ತಿತ್ತು. ಅದನ್ನು ಕಳೆದ ಬಜೆಟ್‌­ನಲ್ಲಿ ₨ 6 ಸಾವಿರಕ್ಕೆ ಏರಿಸ­ಲಾಗಿತ್ತು. ಆದರೆ ಇತ್ತೀಚೆಗೆ ಇಳಕಲ್‌ನಲ್ಲಿ ಗ್ರಾನೈಟ್‌ ಗಣಿ ಮಾಲೀಕರು ಪ್ರತಿಭಟನೆ ನಡೆ­ಸಿದ ನಂತರ ರಾಜಧನ ಮೊದಲಿದ್ದ ಪ್ರಮಾಣಕ್ಕೆ ಇಳಿದಿದೆ.

ಉತ್ತರ ಕರ್ನಾಟಕದ ಭಾಗದಲ್ಲಿ ರೈತರ ಪಟ್ಟಾ ಜಮೀನಿನಲ್ಲಿ ಗಣಿ ಗುತ್ತಿಗೆ­ಯನ್ನು ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿತ್ತು.

ಹಳೆ ಮೈಸೂರು ಭಾಗ­ದಲ್ಲಿ ಜಿಲ್ಲಾಧಿಕಾರಿಗಳೇ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡು­ತ್ತಿದ್ದರು. ಇದೇ ಪದ್ಧತಿಯನ್ನು ಉತ್ತರ ಕರ್ನಾಟಕದಲ್ಲಿಯೂ ಜಾರಿ­ಗೊಳಿಸ­ಬೇಕು ಎಂದು ಗಣಿ ಮಾಲೀಕರು ಒತ್ತಾ­ಯಿಸಿ­ದ್ದರು. ಹೀಗಾಗಿ ಕಳೆದ ಮಾರ್ಚ್ ನಲ್ಲಿ ರಾಜ್ಯ ಸರ್ಕಾರ ಅಧಿ­ಸೂಚನೆ ಹೊರಡಿಸಿ, ಉತ್ತರ ಕರ್ನಾಟಕ­ದಲ್ಲಿಯೂ ಪಟ್ಟಾ ಜಮೀನಿನಲ್ಲಿ ಗಣಿ­ಗಾರಿಕೆಗೆ ಅನುಮತಿ ನೀಡುವ ಹೊಣೆ­ಯನ್ನು ಆಯಾ ಜಿಲ್ಲಾಧಿಕಾರಿಗಳಿಗೇ ನೀಡಿದೆ.

ರಾಜ್ಯದ ಎಲ್ಲೆಡೆ ಒಂದೇ ರೀತಿಯ ವ್ಯವಸ್ಥೆ ಇರಬೇಕು ಎನ್ನುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಸಮರ್ಥನೆ.

ಆದರೆ ಈ ಭಾಗದಲ್ಲಿ ಕೋಟ್ಯಂತರ ರೂಪಾಯಿ ರಾಜಧನ ವಂಚನೆಯಾಗುತ್ತಿರುವ ಬಗ್ಗೆ ಅವರು ಮಾತನಾಡುವುದಿಲ್ಲ.

ಈ ಭಾಗದಲ್ಲಿ ಗಣಿಗಾರಿಕೆ ಆರಂಭವಾಗಿದ್ದು 1975ರಲ್ಲಿ. ಆಗ ಜೆಮ್‌ ಕಂಪೆನಿ ಮೊದಲ ಬಾರಿಗೆ ಗಣಿಗಾರಿಕೆಯನ್ನು ಆರಂಭಿ­ಸಿತು. 1990ರ ನಂತರ ಗಣಿಗಾರಿಕೆ ಹೆಚ್ಚಾಯಿತು. 2000ನೇ ಇಸ್ವಿ ನಂತರ ವಿಪರೀತವಾಗಿದೆ. ಬೇಕಾಬಿಟ್ಟಿ ಗಣಿ­ಗಾ­ರಿಕೆ ನಡೆಯುತ್ತಿದೆ.

1994ರ ಗಣಿ ಮತ್ತು ಖನಿಜ ನಿಯಮ (ನಿರ್ಬಂಧಗಳು) ಪ್ರಕಾರ ಸಾರ್ವಜನಿಕ ಸ್ಥಳ, ಚರ್ಚ್, ಮಸೀದಿ, ಮಂದಿರ, ಶಾಲಾ ಕಾಲೇಜು, ಜಲಾಶಯ, ಕಾಲುವೆ, ಕೆರೆ ಮುಂತಾದ ಪ್ರದೇಶಗಳಿಂದ ಗಣಿಗಾರಿಕೆ ಕನಿಷ್ಠ 200 ಮೀಟರ್‌ ದೂರ ಇರಬೇಕು. ಆದರೆ ಈ ನಾಲ್ಕೂ ಜಿಲ್ಲೆ­ಗಳಲ್ಲಿ ಗಣಿ ಮಾಲೀ­ಕರು ಈ ನಿಯಮವನ್ನು ಪಾಲಿಸುವುದು ಕಂಡುಬರುತ್ತಿಲ್ಲ.

ಕುಷ್ಟಗಿ ತಾಲ್ಲೂಕಿನ ಕಡೂರು, ಹುನಗುಂದ ತಾಲ್ಲೂಕಿನ ಬಲಕುಂದಿ ಗ್ರಾಮದ ಬೃಹತ್‌ ಕೆರೆಗಳಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ. ಕಡೂರು ಕೆರೆ ಸುಮಾರು 600 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಕೆರೆಯ ಅಕ್ಕಪಕ್ಕ ಮತ್ತು ಅದರ ಎರಡೂ ಕಾಲುವೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಕೆರೆಗೆ ನೀರು ಬರುವ ಕಾಲುವೆಗಳೆಲ್ಲ ಹಾಳಾಗಿವೆ. ರೈತರ ಜಮೀನಿಗೆ ನೀರು ಹರಿಸುವ ಕಾಲುವೆಗಳೂ ಗಣಿಯ ಸ್ಫೋಟಕ್ಕೆ ಸಿಲುಕಿ ಹಾಳಾಗಿವೆ. ಇಲ್ಲಿ ಕಾಲುವೆಗಳು ಇದ್ದವು ಎಂದು ಪತ್ತೆ ಮಾಡುವುದು ಕೂಡ ಕಷ್ಟವಾಗಿದೆ.

ಬಲಕುಂದಿ ಕೆರೆಯ ಅಂಗಳದಲ್ಲಿಯೇ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಡೀ ಕೆರೆಯ ಆವರಣ­ದಲ್ಲಿ ಕಲ್ಲುಗಳೇ ತುಂಬಿಕೊಂಡಿದ್ದು ಇದೊಂದು ಕೆರೆಯಾಗಿತ್ತು ಎನ್ನುವುದೂ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಷ್ಟಗಿ ತಾಲ್ಲೂಕಿನ ಸೇಬಿನಕಟ್ಟಿ­ಯ­ಲ್ಲಿಯೂ ಕೆರೆಯಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇಳಕಲ್ಲಿನ ಹಳ್ಳ ಕೊಳ್ಳಗಳೂ ಗಣಿಗಾರಿಕೆಯ ಆರ್ಭ­ಟಕ್ಕೆ ಸಿಲುಕಿ ಬತ್ತಿ ಹೋಗಿವೆ. ಕಡೂರು, ಅಂಟರತಾಣ, ಪುರಚಗೇರಿ, ಕಲ್ಲು ಗೋನಾಳ (ಕಲ್ಲೂರು), ಬಂಡರಗಲ್ಲು, ಹೂಲಗೇರಿ, ಸೇಬಿನಕಟ್ಟಿ, ಮನ್ನೇರಾಳ, ಹೊಸೂರು, ಹನುಮ­ಸಾಗರ, ರಾಯಚೂರು ಜಿಲ್ಲೆ ಮಾಕಾಪುರ ಮುಂತಾದ ಗ್ರಾಮಗಳ ಒಡಲಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ.

‘ರಾತ್ರಿ ಹಗಲು ನೂರಾರು ಜೆಸಿಬಿ, ಟ್ರಕ್‌, ಲಾರಿ, ಟ್ರ್ಯಾಕ್ಟರ್ ಗಳ ಓಡಾಟ, ಸ್ಫೋಟದ ಶಬ್ದಗಳಿಂದ ಬದುಕು ದುಸ್ತರವಾಗಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಊಟಕ್ಕೆ ಕುಳಿತರೆ ದೂಳು ಬಂದು ಅನ್ನದ ಮೇಲೆ ಬೀಳುತ್ತದೆ. ಎಷ್ಟೋ ಬಾರಿ ಊಟ ಮಾಡುವುದೂ ಕಷ್ಟವಾಗುತ್ತದೆ. ಗಣಿಯಲ್ಲಿ ಸ್ಫೋಟವಾದಾಗ ನಮ್ಮ ಮನೆಗಳು ಅಲುಗಾಡುತ್ತವೆ. ಗೋಡೆಯ ಕಲ್ಲುಗಳು ಉದುರುತ್ತವೆ. ನಮ್ಮ ಗೋಳು ಕೇಳೋರ್‍್ಯಾರು’ ಎಂದು ಅಂಟರತಾಣದ ದುರುಗಪ್ಪ ಪ್ರಶ್ನೆ ಮಾಡುತ್ತಾರೆ.

ಕಲ್ಲು ಗಣಿಗಾರಿಕೆಯಿಂದ ಉಂಟಾದ ಹೊಂಡಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿದೆ. ಇದರಿಂದ ಈ ಗ್ರಾಮಗಳಲ್ಲಿ ಮಲೇರಿಯಾ ವ್ಯಾಪಕವಾಗಿದೆ ಎಂದು ಕುಷ್ಟಗಿ ತಾಲ್ಲೂಕು ಹೂಲಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಬಲಕುಂದಿ ಮತ್ತು ಕಡೂರು ಕೆರೆಗಳ ಅಂಗಳದಲ್ಲಿಯೇ ನಡೆಯುತ್ತಿರುವ ಗಣಿಗಾರಿಕೆ ವಿರೋಧಿಸಿ ನೀರು ಬಳಕೆದಾರರ ಸಂಘ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ. ಆದರೆ ಅದಕ್ಕೆ ಈವರೆಗೂ ಜಯ ಸಿಕ್ಕಿಲ್ಲ.

‘ಗಣಿಗಾರಿಕೆಯಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ನೀರಿಲ್ಲದೆ ಹೊಲಗಳಲ್ಲಿ ಏನನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ಗಣಿಗಾರಿಕೆಯನ್ನು ನಿಲ್ಲಿಸಿ ಕೆರೆಯನ್ನು ಭರ್ತಿ ಮಾಡಿ ನೀರು ಕೊಡಬೇಕು ಎಂದು ನಾವು ಎಷ್ಟೇ ಕೂಗಾಡಿದರೂ ನಮ್ಮ ಕೂಗಿಗೆ ಬೆಲೆ ಸಿಗುತ್ತಿಲ್ಲ. ಆದರೆ ಗಣಿ ಮಾಲೀಕರು 2 ದಿನ ಪ್ರತಿಭಟನೆ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಅವರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಇದು ಯಾವ ನ್ಯಾಯ’ ಎಂದು ಕಡೂರು ಗ್ರಾಮದ ಶರಣಪ್ಪ ಪ್ರಶ್ನೆ ಮಾಡುತ್ತಾರೆ.

ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿಯೂ ಗಣಿಗಾರಿಕೆ ಯಾವುದೇ ಎಗ್ಗಿಲ್ಲದೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.