ADVERTISEMENT

ಚೆನ್ನೈನಲ್ಲಿ ಕನ್ನಡಿಗರಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2014, 10:26 IST
Last Updated 7 ಅಕ್ಟೋಬರ್ 2014, 10:26 IST

ಚೆನ್ನೈ(ಪಿಟಿಐ): ‘ಜಯಲಲಿತಾ ಅವರಿಗೆ ಜಾಮೀನು ದೊರೆಯದಿದ್ದರೆ, ಇಲ್ಲಿರುವ ಕನ್ನಡಿಗರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗುವುದು’ ಎಂಬ ಬೆದರಿಕೆ ಬರಹವುಳ್ಳ ಭಿತ್ತಿಪತ್ರಗಳು ಚೆನ್ನೈನ ಹಲವೆಡೆ ಮಂಗಳವಾರ ಬೆಳಿಗ್ಗೆ ಕಂಡುಬಂದಿವೆ.

ಜಯಲಲಿತಾ ಅವರ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರು ಹೈಕೋರ್ಟ್‌ನಲ್ಲಿ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲೇ  ಈ ಭಿತ್ತಿಪತ್ರಗಳು ಕಂಡುಬಂದಿರುವುದು ವಿಶೇಷ.

ಇತ್ತೀಚೆಗೆ ‘ಎಐಎಡಿಎಂಕೆ’ ಪಕ್ಷದಿಂದ ಉಚ್ಛಾಟನೆಗೊಂಡ ಕಾರ್ಯ­ಕರ್ತರೊಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ಪೋಲಿಸರ ಪ್ರಾಥಮಿಕ ತನಿಖೆಯಿಂದ  ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಚೆನ್ನೈನ ದಕ್ಷಿಣ ಭಾಗಗಳಲ್ಲಿ ಅಂಟಿಸಿರುವ ಭಿತ್ತಿಪತ್ರದಲ್ಲಿ ‘ಎಚ್ಚರಿಕೆ... ಮುಖ್ಯಮಂತ್ರಿ ಅಮ್ಮ ಅವರನ್ನು ತಕ್ಷಣ ಬಿಡುಗಡೆ ಮಾಡಿ. ಇಲ್ಲದಿದ್ದರೆ ತಮಿಳುನಾಡಿನಲ್ಲಿರುವ ಕನ್ನಡಿಗರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುತ್ತೇವೆ’ ಎಂದು ಬರೆಯಲಾಗಿದೆ. ಭಿತ್ತಿಪತ್ರದಲ್ಲಿ ಎಐಎಡಿಎಂಕೆ ಪಕ್ಷದ ಕೆಲವು ನಾಯಕರ ಹೆಸರುಗಳನ್ನೂ ಕೂಡ ಬರೆಯಲಾಗಿದೆ.

ಚೆನ್ನೈ ದಕ್ಷಿಣ ಭಾಗದ(ಉತ್ತರ) ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿ ವಿ.ಪಿ ಕಲೈರಾಜನ್‌ ಅವರು ಪಕ್ಷದಿಂದ ಹೊರಹೋದ ಕೆ.ಸಿ ವಿಜಯ್‌ ನಮ್ಮ ಗಮನಕ್ಕೆ ಬಾರದೆ ಈ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಭಿತ್ತಿಪತ್ರ ತೆಗೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT