ADVERTISEMENT

ಜನಾಕ್ರೋಶಕ್ಕೆ ಮಣಿದ ಕೇಂದ್ರ: ಪಿಎಫ್‌ ಅಧಿಸೂಚನೆ ರದ್ದು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2016, 14:35 IST
Last Updated 19 ಏಪ್ರಿಲ್ 2016, 14:35 IST
ಜನಾಕ್ರೋಶಕ್ಕೆ  ಮಣಿದ ಕೇಂದ್ರ: ಪಿಎಫ್‌ ಅಧಿಸೂಚನೆ ರದ್ದು
ಜನಾಕ್ರೋಶಕ್ಕೆ ಮಣಿದ ಕೇಂದ್ರ: ಪಿಎಫ್‌ ಅಧಿಸೂಚನೆ ರದ್ದು   

ನವದೆಹಲಿ (ಪಿಟಿಐ): ದೇಶದಾದ್ಯಂತ ಕಾರ್ಮಿಕ ವಲಯದಿಂದ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ 1ರಿಂದ ಜಾರಿಗೆ ತರಲು ಉದ್ದೇಶಿಸಿದ್ದ ಪಿಎಫ್‌ ಹಿಂಪಡೆಯುವುದರ ಮೇಲಿನ ಕಠಿಣ ನಿಯಮಗಳನ್ನು ಕೈಬಿಟ್ಟಿದೆ.

‘ಫೆಬ್ರುವರಿ 10ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಲಾಗಿದೆ. ಪಿಎಫ್‌ ವಾಪಸ್‌ ಪಡೆಯಲು, ಈ ಹಿಂದೆ ಜಾರಿಯಲ್ಲಿದ್ದ ನಿಯಮಗಳೇ ಮುಂದುವರಿಯಲಿವೆ’ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ಅವರು ಮಂಗಳವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಕಾರ್ಮಿಕರ ಸಾಮಾಜಿಕ ಭದ್ರತೆ’ ಕಾರಣ ಮುಂದಿಟ್ಟು, ಪಿಎಫ್‌ ಹಿಂಪಡೆಯುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಸರ್ಕಾರ ಹೊರಟಿತ್ತು. ಹೊಸ ನಿಯಮದ ಅನ್ವಯ, ಉದ್ಯೋಗಿಯು ನಿವೃತ್ತಿಗೆ ಮುಂಚೆ ಅಂದರೆ ತನ್ನ ವೇತನದಲ್ಲಿ ಕಡಿತವಾಗಿದ್ದ ಪಿಎಫ್‌ ಮೊತ್ತ ಮತ್ತು ಅದರ ಬಡ್ಡಿ ಮೊತ್ತವನ್ನಷ್ಟೇ ಪೂರ್ಣವಾಗಿ ಹಿಂದಕ್ಕೆ ಪಡೆಯುವ ಅವಕಾಶ ನೀಡಲಾಗಿತ್ತು.

ಕಂಪೆನಿ ತುಂಬಿದ್ದ ಹಣ ಮತ್ತು ಬಡ್ಡಿ ಪಡೆಯಲು 58 ವರ್ಷ ತುಂಬುವವರೆಗೆ ಕಾಯಬೇಕಿತ್ತು. ಇದಕ್ಕೆ ಕಾರ್ಮಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೇಂದ್ರದ ನಡೆಯನ್ನು ವಿರೋಧಿಸಿ ಕಾರ್ಮಿಕರು ರಸ್ತೆಗಿಳಿದಿದ್ದರು. ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ಬಸ್‌ಗಳು ಭಸ್ಮವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT