ADVERTISEMENT

ಜಲ್ಲಿಕಟ್ಟು ಶುರು: ಗೂಳಿ ತಿವಿತಕ್ಕೆ 2 ಬಲಿ

ಶಾಶ್ವತ ಪರಿಹಾರಕ್ಕಾಗಿ ಮುಂದುವರಿದ ಪ್ರತಿಭಟನೆ: ಒಬ್ಬ ಪ್ರತಿಭಟನಾಕಾರ ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಜಲ್ಲಿಕಟ್ಟು ನಿಷೇಧ ತೆರವು, ಪೆಟಾಗೆ ನಿಷೇಧ ಹೇರುವಂತೆ ಆಗ್ರಹಿಸಿ ಸಾವಿರಾರು ಯುವಕರು ಚೆನ್ನೈನ ಮರೀನಾ ಕಡಲ ಕಿನಾರೆಯಲ್ಲಿ ಪ್ರತಿಭಟನೆ ನಡೆಸಿದರು (ಎಡ ಚಿತ್ರ), ಬೆನ್ನಿನಲ್ಲಿ ರಚಿಸಿರುವ ಗೂಳಿಯ ಚಿತ್ರವನ್ನು ಯುವಕನೊಬ್ಬ ಪ್ರದರ್ಶಿಸಿದ – ಪಿಟಿಐ ಚಿತ್ರ
ಜಲ್ಲಿಕಟ್ಟು ನಿಷೇಧ ತೆರವು, ಪೆಟಾಗೆ ನಿಷೇಧ ಹೇರುವಂತೆ ಆಗ್ರಹಿಸಿ ಸಾವಿರಾರು ಯುವಕರು ಚೆನ್ನೈನ ಮರೀನಾ ಕಡಲ ಕಿನಾರೆಯಲ್ಲಿ ಪ್ರತಿಭಟನೆ ನಡೆಸಿದರು (ಎಡ ಚಿತ್ರ), ಬೆನ್ನಿನಲ್ಲಿ ರಚಿಸಿರುವ ಗೂಳಿಯ ಚಿತ್ರವನ್ನು ಯುವಕನೊಬ್ಬ ಪ್ರದರ್ಶಿಸಿದ – ಪಿಟಿಐ ಚಿತ್ರ   

ಚೆನ್ನೈ: ಗೂಳಿ ಪಳಗಿಸುವ ಕ್ರೀಡೆ ಜಲ್ಲಿಕಟ್ಟು, ಈ ಕ್ರೀಡೆ ನಡೆಯುವ ಮುಖ್ಯ ಸ್ಥಳವಾದ ಮದುರೆ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ನಡೆದಿಲ್ಲ. ಆದರೆ ಇತರ ಹಲವು ಜಿಲ್ಲೆಗಳಲ್ಲಿ ಜಲ್ಲಿಕಟ್ಟು ನಡೆದಿದೆ. ಪುದುಕೋಟ್ಟೈಯಲ್ಲಿ ಜಲ್ಲಿಕಟ್ಟುವಿಗೆ ಬಳಸಿದ ಗೂಳಿ ತಿವಿತಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಜಲ್ಲಕಟ್ಟು ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ಸೇರಿಸಲು ಕರೆದೊಯ್ಯುವ ದಾರಿಯಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

28 ಮಂದಿ ಗಾಯಗೊಂಡಿದ್ದಾರೆ. ಮದುರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ನಿರ್ಜಲೀಕರಣದಿಂದಾಗಿ ಮೃತಪಟ್ಟಿದ್ದಾರೆ.
ತಿರುನೆಲ್ವೇಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಹೆಣ್ಣು ಮಕ್ಕಳೂ ಸೇರಿ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಸುಪ್ರೀಂ ಕೋರ್ಟ್ ನಿಷೇಧ ಹೇರಿರುವ ಜಲ್ಲಿಕಟ್ಟು ನಡೆಸಲು ಸಾಧ್ಯವಾಗುವಂತೆ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಹೀಗಾಗಿ ತಿರುಚ್ಚಿ, ತಂಜಾವೂರು, ಪುದುಕೋಟ್ಟೈ, ರಾಮನಾಥಪುರಂ ಸೇರಿ ವಿವಿಧ ಜಿಲ್ಲೆಗಳಲ್ಲಿ ಗೂಳಿ ಪಳಗಿಸುವ ಕ್ರೀಡೆ ನಡೆದಿದೆ.
ಶಾಶ್ವತ ಪರಿಹಾರಕ್ಕಾಗಿ ಪ್ರತಿಭಟನೆ: ಜಲ್ಲಿಕಟ್ಟು ನಡೆಯುವ ಮುಖ್ಯ ಕೇಂದ್ರವಾದ ಮದುರೆ ಸಮೀಪದ ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು ನಡೆಯಲಿಲ್ಲ.
ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿ ಅಲಂಗನಲ್ಲೂರಿನಲ್ಲಿ ಪ್ರತಿಭಟನೆ ಮುಂದುವರಿದಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅಲ್ಲಿಗೆ ಬಂದಿದ್ದರು. ಆದರೆ ಪ್ರತಿಭಟನೆಯಿಂದಾಗಿ ಉದ್ಘಾಟನೆ ಮಾಡದೆಯೇ ಅವರು ಚೆನ್ನೈಗೆ ಹಿಂದಿರುಗಿದರು.
ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಉದ್ಘಾಟಿಸುವುದಾಗಿ ಪನ್ನೀರ್‌ಸೆಲ್ವಂ ಅವರು ಶನಿವಾರ ಘೋಷಿಸಿದ್ದರು.

ADVERTISEMENT

ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವ ಚೆನ್ನೈನ ಮರೀನಾ ಕಡಲ ಕಿನಾರೆ ಸೇರಿದಂತೆ ವಿವಿಧೆಡೆಗಳಲ್ಲಿಯೂ ಪ್ರತಿಭಟನೆ ಮುಂದುವರಿದಿದೆ. ಜಲ್ಲಿಕಟ್ಟು ನಡೆಸಲು ಸಾಧ್ಯವಾಗುವಂತೆ ಶಾಶ್ವತ ಪರಿಹಾರ ರೂಪಿಸಬೇಕು ಮತ್ತು ಪ್ರಾಣಿ ದಯಾ ಸಂಘ ಪೆಟಾ ಮೇಲೆ ನಿಷೇಧ ಹೇರಬೇಕು ಎಂಬುದು ಅವರ ಆಗ್ರಹವಾಗಿದೆ.

ಆದರೆ ‘ಜಲ್ಲಿಕಟ್ಟು ನಡೆಸುವುದಕ್ಕಾಗಿ ರಾಜ್ಯ ಹೊರಡಿಸಿರುವ ಸುಗ್ರೀವಾಜ್ಞೆ ಶಾಶ್ವತವಾದ ಪರಿಹಾರವಾಗಿದೆ. ಇದು ಸದೃಢ ಮತ್ತು ಸುಸ್ಥಿರ ಕ್ರಮವಾಗಿದೆ. ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಕಾನೂನು ರಚಿಸಲಾಗುವುದು’ ಎಂದು ಪನ್ನೀರ್‌ಸೆಲ್ವಂ ಹೇಳಿದ್ದಾರೆ.

ವಿಧಾನಸಭೆ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ‘ಜಲ್ಲಿಕಟ್ಟು ಮೇಲಿನ ನಿಷೇಧವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಜನರು ನಿರ್ಧರಿಸಿದ ದಿನದಂದು ಅಲಂಗನಲ್ಲೂರಿನಲ್ಲಿಯೂ ಜಲ್ಲಿಕಟ್ಟು ನಡೆಯಲಿದೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ದಿಂಡಿಗಲ್‌ನ ನಾಥಂ ಕೋವಿಲಪಟ್ಟಿಯಲ್ಲಿ ಜಲ್ಲಿಕಟ್ಟು ಕಾರ್ಯಕ್ರಮವನ್ನು ಪನ್ನೀರ್‌ಸೆಲ್ವಂ ಉದ್ಘಾಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅಲ್ಲಿಯೂ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು.

ಕಂಬಳಕ್ಕೆ ಬಿಜೆಪಿ ಬೆಂಬಲ

ಬೆಂಗಳೂರು: ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, ‘ಕಂಬಳಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಕಂಬಳಕ್ಕೆ ಹೇರಿರುವ ನಿಷೇಧ ತೆರವುಗೊಳಿಸಿ, ಕಂಬಳ ಕ್ರೀಡೆ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಪ್ರತಿಪಾದಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಅರ್ಜಿ

ಜಲ್ಲಿಕಟ್ಟು ನಡೆಸಲು ಸಾಧ್ಯವಾಗುವಂತೆ ಹೊರಡಿಸಲಾದ ಸುಗ್ರೀವಾಜ್ಞೆಗೆ ಸಂಬಂಧಿಸಿ ರಾಜ್ಯದ ವಾದವನ್ನು ಆಲಿಸದೆ ಯಾವುದೇ ಆದೇಶ ನೀಡಬಾರದು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ (ಕೇವಿಯಟ್‌) ಸಲ್ಲಿಸಿದೆ.

ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತ ಇರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.
ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿ ಪರಿಹಾರವೊಂದನ್ನು ಕಂಡುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಇತ್ತೀಚೆಗೆ ತಿಳಿಸಿದೆ. ಹಾಗಾಗಿ ಒಂದು ವಾರ ಈ ವಿಚಾರದಲ್ಲಿ ಯಾವುದೇ ಆದೇಶ ನೀಡದಿರಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.