ADVERTISEMENT

ಜಿಎಸ್‌ಟಿ ಬದಲಾವಣೆಗೆ ಆಗ್ರಹಿಸಲು ಪಕ್ಷದ ಸಚಿವರಿಗೆ ರಾಹುಲ್‌ ಸೂಚನೆ

ನೋಟು ರದ್ದತಿ, ಜಿಎಸ್‌ಟಿ ಅರ್ಥವ್ಯವಸ್ಥೆಗೆ ಅಪ್ಪಳಿಸಿದ ಟಾರ್ಪೆಡೊಗಳು–ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಸಭೆ ಬಳಿಕ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೊಂದಿಗೆ ಹೊರ ಬಂದ ರಾಹುಲ್‌ ಗಾಂಧಿ –ಪಿಟಿಐ ಚಿತ್ರ
ಸಭೆ ಬಳಿಕ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೊಂದಿಗೆ ಹೊರ ಬಂದ ರಾಹುಲ್‌ ಗಾಂಧಿ –ಪಿಟಿಐ ಚಿತ್ರ   

ನವದೆಹಲಿ: ಜಿಎಸ್‌ಟಿ ಪಾಲನೆಯಲ್ಲಿ ಎದುರಾಗುತ್ತಿರುವ ಕಷ್ಟಗಳು ಮತ್ತು ತೆರಿಗೆ ದರ ವ್ಯವಸ್ಥೆಯನ್ನು ಇನ್ನಷ್ಟು ತರ್ಕಬದ್ಧಗೊಳಿಸುವುದು ಸೇರಿದಂತೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ನಿರ್ದಿಷ್ಟ ಬದಲಾವಣೆಗಳಿಗಾಗಿ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆಗ್ರಹಿಸುವಂತೆ ಕಾಂಗ್ರೆಸ್‌ ಉ‍ಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಪಕ್ಷದ ಆಡಳಿತ ಇರುವ ರಾಜ್ಯಗಳ ಹಣಕಾಸು ಸಚಿವರಿಗೆ ಸೂಚಿಸಿದ್ದಾರೆ.

ಅರ್ಥವ್ಯವಸ್ಥೆಯ ಮೇಲೆ ಜಿಎಸ್‌ಟಿ ಪರಿಣಾಮದ ಬಗ್ಗೆ ರಾಹುಲ್‌ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆ ಬಳಿಕ ಈ ನಿರ್ದೇಶನ ನೀಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮುಖಂಡರಾದ ಪಿ. ಚಿದಂಬರಂ, ಜೈರಾಂ ರಮೇಶ್‌ ಮತ್ತು ಪಂಜಾಬ್‌ನ ಹಣಕಾಸು ಸಚಿವ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ADVERTISEMENT

‘ಜಿಎಸ್‌ಟಿಯ ನೀಲನಕ್ಷೆ ಮತ್ತು ರಚನೆಯಲ್ಲಿನ ದೋಷಗಳು ಹಾಗೂ ಅದರ ಅನುಸರಣೆಯಲ್ಲಿನ ತೊಡಕುಗಳು, ಉದ್ಯೋಗ ಮತ್ತು ವಹಿವಾಟುಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ’ ಎಂದು ಮನಮೋಹನ್‌ ಸಿಂಗ್‌ ಸಭೆಯಲ್ಲಿ ಹೇಳಿದ್ದಾರೆ.

ಸಭೆ ನಂತರ ಮಾತನಾಡಿದ ರಾಹುಲ್‌ ಗಾಂಧಿ, ‘ಜಿಎಸ್‌ಟಿ ಒಳ್ಳೆಯ ಯೋಜನೆ. ಆದರೆ, ಸರ್ಕಾರ ಅದನ್ನು ಕೆಟ್ಟ ರೀತಿಯಲ್ಲಿ ಜಾರಿಗೆ ತಂದಿದ್ದರಿಂದ ಜಿಡಿಪಿ ಮತ್ತು ಆರ್ಥಿಕ ಪ್ರಗತಿಗೆ ಧಕ್ಕೆಯಾಗಿದೆ’ ಎಂದು ಹೇಳಿದ್ದಾರೆ.

ಟಾರ್ಪೆಡೊ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಅವರು, ನೋಟು ರದ್ದತಿ ಮತ್ತು ಜಿಎಸ್‌ಟಿಯು ದೇಶದ ಅರ್ಥವ್ಯವಸ್ಥೆಗೆ ಅಪ್ಪಳಿಸಿರುವ ಎರಡು ಟಾರ್ಪೆಡೊಗಳು (ಹಡಗು ಸ್ಫೋಟಕ) ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ಘೋಷಿಸಿದ ನೋಟು ರದ್ದತಿ ಮಹಾ ದುರಂತ. ಈ ನಿರ್ಧಾರದ ಬಗ್ಗೆ ಸಂಭ್ರಮ ಪಡುವಂತಹದ್ದು ಏನಿದೆ ಎಂಬುದು ನನಗೆ ಗೊತ್ತಿಲ್ಲ. ದೇಶದ ಅರ್ಥವ್ಯವಸ್ಥೆಯು ಈಗ ಸಂಪೂರ್ಣವಾಗಿ ಕುಸಿದುಬಿದ್ದಿದೆ’ ಎಂದು ಅವರು ಹರಿಹಾಯ್ದರು.

ನ.8ರಂದು ರ‍್ಯಾಲಿ: ನೋಟು ರದ್ದತಿ ಘೋಷಣೆ ಮಾಡಿ ಒಂದು ವರ್ಷ ಪೂರೈಸುವ ದಿನವಾದ ನವೆಂಬರ್‌ 8ರಂದು ಕಾಂಗ್ರೆಸ್‌ ದೇಶದಾದ್ಯಂತ ಕಪ್ಪು ದಿನ ಆಚರಿಸಲಿದೆ.

‘ಆ ದಿನ ಬೆಳಗ್ಗೆ ಪಕ್ಷದ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅವರು ನಿರ್ಧಾರವನ್ನು ಘೋಷಣೆ ಮಾಡಿದ ಸಮಯವಾದ ರಾತ್ರಿ 8 ಗಂಟೆಗೆ ಕಾರ್ಯಕರ್ತರು ಮೋಂಬತ್ತಿ ಮೆರವಣಿಗೆ ನಡೆಸಲಿದ್ದಾರೆ’ ಎಂದು ಅದು ಹೇಳಿದೆ.

‘ಭಾರತದ ಸಂಕಷ್ಟ ಮುಂದುವರಿದಿದೆ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಎಲ್ಲ ರಾಜ್ಯಗಳ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲು ಅದು ಯೋಜಿಸುತ್ತಿದೆ. ರಾಹುಲ್‌ ಗಾಂಧಿ ಅವರೂ ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: ಬಿಜೆಪಿ

‘ಮೋದಿ ಸರ್ಕಾರ ದೇಶದ ಅರ್ಥವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಯತ್ನಿಸುತ್ತಿದೆ. ಇದು ಕಾಂಗ್ರೆಸ್‌ ಸರ್ಕಾರದ ‘ಭ್ರಷ್ಟ ನೀತಿ’ಗಳಿಗೆ ವಿರುದ್ಧವಾಗಿರುವುದರಿಂದ ಅದು ನೋಟು ರದ್ದತಿಯನ್ನು ವಿರೋಧಿಸುತ್ತಿದೆ’ ಎಂದು ಬಿಜೆಪಿ ಸೋಮವಾರ ಹೇಳಿದೆ.

ಜಿಎಸ್‌ಟಿಯನ್ನು ಟೀಕಿಸಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ವಿರುದ್ಧ ಹರಿಹಾಯ್ದಿರುವ ಬಿಜೆಪಿ ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್‌, ‘ಜಿಎಸ್‌ಟಿ ತನ್ನ ಕನಸಿನ ಕೂಸು ಎಂದು ಅವರ ಪಕ್ಷ ಹೇಳಿಕೊಂಡಿತ್ತು. ಆದರೆ, ಅವರು ವ್ಯಕ್ತಪಡಿಸುತ್ತಿರುವ ನಿಲುವು ಅವರಲ್ಲಿನ ಆಷಾಢಭೂತಿತನ ಮತ್ತು ದ್ವಂದ್ವ ನೀತಿಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

‘ಜಿಎಸ್‌ಟಿ ಮಂಡಳಿಯಲ್ಲಿ ಕೈಗೊಂಡಿರುವ ಪ್ರತಿ ನಿರ್ಧಾರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳು ಭಾಗಿಯಾಗಿವೆ. ಈಗ ಸುಳ್ಳುಗಳನ್ನು ಹೇಳಿ ಜನರನ್ನು ಅದು ಮೋಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.