ADVERTISEMENT

ಜೀವಮಾನ ಸಾಧನೆ: ಮಣಿರತ್ನಂಗೆ ‘ಬೆಂಗಳೂರು ಸಿನಿಮೋತ್ಸವ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 20:12 IST
Last Updated 27 ಫೆಬ್ರುವರಿ 2018, 20:12 IST
ಜೀವಮಾನ ಸಾಧನೆ: ಮಣಿರತ್ನಂಗೆ ‘ಬೆಂಗಳೂರು ಸಿನಿಮೋತ್ಸವ’ ಪ್ರಶಸ್ತಿ
ಜೀವಮಾನ ಸಾಧನೆ: ಮಣಿರತ್ನಂಗೆ ‘ಬೆಂಗಳೂರು ಸಿನಿಮೋತ್ಸವ’ ಪ್ರಶಸ್ತಿ   

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಅವರನ್ನು 10ನೇ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ತಮಿಳು ಚಿತ್ರಗಳ ಮೂಲಕ ಭಾರತೀಯ ಚಿತ್ರೋದ್ಯಮಕ್ಕೆ ನೀಡಿರುವ ಕೊಡುಗೆಯನ್ನು ಗುರ್ತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ₹ 10 ಲಕ್ಷ ನಗದು ಬಹುಮಾನ ಹೊಂದಿರುವ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಿಂದ ಆರಂಭಿಸಲಾಗಿದ್ದು, ಚಿತ್ರರಂಗಕ್ಕೆ ಗಣನೀಯ ಸೇವೆ ಸಲ್ಲಿಸಿರುವ ದೇಸಿ ಅಥವಾ ವಿದೇಶಿ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಮಾರ್ಚ್‌ 1ರಂದು ನಡೆಯುವ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು ಎಂದು ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ರಿಜಿಸ್ಟ್ರಾರ್‌ ಎಚ್‌.ಬಿ. ದಿನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಮಿಳು ಚಿತ್ರಗಳ ಮೂಲಕ ಚಿತ್ರರಸಿಕರಿಗೆ ಪರಿಚಿತವಾಗಿರುವ ಮಣಿರತ್ನಂ ಚಿತ್ರರಂಗ ಪ್ರವೇಶಿಸಿದ್ದು ಕನ್ನಡ ಸಿನಿಮಾ ನಿರ್ದೇಶಿಸುವ ಮೂಲಕ. ಅವರ ನಿರ್ದೇಶನದ ಚೊಚ್ಚಿಲ ಚಿತ್ರ ‘ಪಲ್ಲವಿ ಅನುಪಲ್ಲವಿ’ (1983)ಯಲ್ಲಿ ಬಾಲಿವುಡ್‌ ನಟ ಅನಿಲ್‌ ಕಪೂರ್‌ ನಾಯಕಾಗಿ ನಟಿಸಿದ್ದರು. ಈ ಸಿನಿಮಾದ ಚಿತ್ರಕಥೆಗಾಗಿ ಮಣಿರತ್ನಂ ಅವರಿಗೆ ರಾಜ್ಯಪ್ರಶಸ್ತಿ ದೊರೆತಿದೆ.

ನಿರ್ದೇಶನದ ಜೊತೆಗೆ ನಿರ್ಮಾಣ ಹಾಗೂ ಚಿತ್ರಕಥಾ ರಚನಕಾರರಾಗಿಯೂ ಮಣಿರತ್ನಂ ಗುರ್ತಿಸಿಕೊಂಡಿದ್ದಾರೆ. ಛಾಯಾಗ್ರಹಣದ ನೆಳಲು ಬೆಳಕಿನಾಟ, ಸಂಕಲನದಲ್ಲಿನ ತೀವ್ರತೆ ಹಾಗೂ ಪರಿಣಾಮಕಾರಿ ಸಂಗೀತದ ಮೂಲಕ ದೃಶ್ಯವೈಭವವನ್ನು ಒಳಗೊಂಡಿರುವ ಅವರ ಚಿತ್ರಗಳು ಚಿತ್ರರಸಿಕರನ್ನು ಸೆಳೆದಿವೆ.

‘ಮೌನರಾಗಂ’, ‘ನಾಯಗನ್‌’, ‘ರೋಜಾ’, ‘ತಿರುಡಾ ತಿರುಡಾ’, ‘ಮುಂಬೈ’, ‘ಇರುವರ್‌’ ಹಾಗೂ ‘ದಿಲ್‌ ಸೆ’ ಅವರ ನಿರ್ದೇಶನದ ಕೆಲವು ಪ್ರಖ್ಯಾತ ತಮಿಳು ಚಿತ್ರಗಳು. ‘ಗೀತಾಂಜಲಿ’ ಅವರ ನಿರ್ದೇಶನದ ಏಕೈಕ ತೆಲುಗು ಸಿನಿಮಾ.

ವಿಭಿನ್ನ ಕಥೆಗಳನ್ನು ಹೊಂದಿರುವ ಮಣಿರತ್ನಂ ಸಿನಿಮಾಗಳು ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ಸೃಜನಶೀಲ ಪ್ರಯತ್ನಗಳಾಗಿ ಪ್ರಸಿದ್ಧವಾಗಿವೆ.

‘ರೋಜಾ’, ‘ಮುಂಬೈ’ ಹಾಗೂ ‘ದಿಲ್‌ ಸೆ’ ಸಿನಿಮಾಗಳು ಭಯೋತ್ಪಾದನೆ ಸಮಸ್ಯೆಯ ಚಿತ್ರಣಗಳಾಗಿವೆ. ಭೂಗತ ಜಗತ್ತಿನ ಒಳಸುಳಿಗಳನ್ನು ಒಳಗೊಂಡಿರುವ ‘ನಾಯಗನ್‌’ ಅತ್ಯುತ್ತಮ ಭಾರತೀಯ ಚಿತ್ರಗಳಲ್ಲೊಂದು ಎಂದು ‘ಟೈಮ್ಸ್‌’ ನಿಯತಕಾಲಿಕೆ ಗುರ್ತಿಸಿದೆ. ತಮಿಳುನಾಡಿನ ಇಬ್ಬರು ಜನಪ್ರಿಯ ರಾಜಕಾರಣಿಗಳಾದ ಎಂ.ಜಿ. ರಾಮಚಂದ್ರನ್‌ ಹಾಗೂ ಕರುಣಾನಿಧಿ ಅವರ ಜೀವನ–ಸಾಧನೆ ‘ಇರುವರ್‌’ ಚಿತ್ರಕ್ಕೆ ಪ್ರೇರಣೆಯಾಗಿದೆ.

‘ಪದ್ಮಶ್ರೀ’ ಗೌರವ ಕೂಡ ಅವರ ಸಿನಿಮಾ ಸಾಧನೆಗೆ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.