ADVERTISEMENT

ತಲಾಖ್‌ಗೆ ರಾಜಕೀಯ ಬಣ್ಣ ಬೇಡ: ಪ್ರಧಾನಿ ಪ್ರತಿಪಾದನೆ

ಮುಸ್ಲಿಂ ಮಹಿಳೆಯರ ಸಮಸ್ಯೆ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ನವದೆಹಲಿಯಲ್ಲಿ ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಹಾಜರಿದ್ದರು	ಪಿಟಿಐ ಚಿತ್ರ
ನವದೆಹಲಿಯಲ್ಲಿ ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಹಾಜರಿದ್ದರು ಪಿಟಿಐ ಚಿತ್ರ   

ನವದೆಹಲಿ: ತ್ರಿವಳಿ ತಲಾಖ್‌ ವಿಚಾರವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಲೇಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಮುಸ್ಲಿಂ ಸಮುದಾಯದ ಪ್ರಬುದ್ಧ ಜನರೇ ತ್ರಿವಳಿ ತಲಾಕ್‌ ಪದ್ಧತಿ ಕೊನೆಗೊಳಿಸುವ ಪ್ರಯತ್ನ ನಡೆಸಲಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಹನ್ನೆರಡನೇ ಶತಮಾನದ ದಾರ್ಶನಿಕ ಸಮಾಜ ಸುಧಾರಕ ಬಸವಣ್ಣನವರ ಜಯಂತಿಯ ಸಂದರ್ಭವನ್ನು ತಲಾಕ್‌ ಸಮಸ್ಯೆ ಬಗ್ಗೆ ಮಾತನಾಡಲು ಪ್ರಧಾನಿ ಬಳಸಿಕೊಂಡರು.

‘ಪ್ರಭಾವಿ ಸಮಾಜ ಸುಧಾರಕರು ಸಮಾಜದ ಒಳಗಿನಿಂದಲೇ ಹೊರಹೊಮ್ಮುತ್ತಾರೆ. ಅವರು ಹಳೆಯ ಕಾಲದ ಪದ್ಧತಿಗಳನ್ನು ನಿರ್ಮೂಲನ ಮಾಡಿ ಆಧುನಿಕ ವ್ಯವಸ್ಥೆಯನ್ನು ರೂಪಿಸುತ್ತಾರೆ’ ಎಂದು ಪ್ರಧಾನಿ ಹೇಳಿದರು.

ADVERTISEMENT

ಭಾರತದ ಮುಸ್ಲಿಮರು ಇಲ್ಲಿ ಸುಧಾರಣೆ ತರುವುದರ ಜತೆಗೆ ಜಗತ್ತಿನಾದ್ಯಂತ ಇರುವ ಮುಸ್ಲಿಮರಿಗೆ ಆಧುನಿಕತೆಯ ಹಾದಿ ತೋರಿಸಬೇಕು. ಅದು ಈ ನೆಲ ನಮ್ಮೆಲ್ಲರಿಗೂ ನೀಡಿರುವ ಶಕ್ತಿ ಮತ್ತು ಚೈತನ್ಯ ಎಂದು ಅವರು ಹೇಳಿದರು.

* ತ್ರಿವಳಿ ತಲಾಖ್‌ ವಿಚಾರದಲ್ಲಿ ಎಲ್ಲರೂ ಜತೆಯಾಗಿ ಪರಿಹಾರ ಕಂಡುಕೊಳ್ಳಿ. ಆ ಪರಿಹಾರಕ್ಕೆ ಅದರದ್ದೇ ಆದ ಘನತೆ ಇರುತ್ತದೆ. ತಲೆಮಾರುಗಳು ನಿಮ್ಮನ್ನು ನೆನಪಿಸಿಕೊಳ್ಳುತ್ತವೆ. 
–ನರೇಂದ್ರ ಮೋದಿ, ಪ್ರಧಾನಿ

* ಯಾವುದೇ ವಿಚಾರವನ್ನು ರಾಜಕೀಯಕ್ಕೆ ಬಳಸಲು ಮೋದಿ ಪರಿಣತ. ತಲಾಖ್‌ ಬಗ್ಗೆ ರಾಜಕೀಯ ಬೇಡ ಎನ್ನುವುದೇ ದೊಡ್ಡ ರಾಜಕೀಯ.
–ಗುಲಾಂ ನಬಿ ಆಜಾದ್‌, ರಾಜ್ಯಸಭೆ ವಿರೋಧ ಪಕ್ಷದ ನಾಯಕ

* ತ್ರಿವಳಿ ತಲಾಖ್‌ ವಿಚಾರವನ್ನು ನಿತ್ಯ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಮುಂದಾಗಿದೆ
* ಆ ಸಂದರ್ಭದಲ್ಲಿಯೇ ಪ್ರಧಾನಿ ತಲಾಖ್‌ ಬಗ್ಗೆ ಮಾತನಾಡಿದ್ದಾರೆ
* ಹದಿನೈದು ದಿನಗಳಲ್ಲಿ ಎರಡನೇ ಬಾರಿ ತಲಾಖ್‌ ಪದ್ಧತಿ ಕೊನೆಗೊಳಿಸುವ ಬಗ್ಗೆ ಪ್ರಸ್ತಾಪ
* ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲೂ ಮೋದಿ ಈ ವಿಚಾರ ಪ್ರಸ್ತಾಪಿಸಿದ್ದರು

ಪ್ರಧಾನಿಯಿಂದ ರಾಜಕಾರಣ: ಕಾಂಗ್ರೆಸ್‌
ತ್ರಿವಳಿ ತಲಾಖ್‌ ವಿಚಾರವನ್ನು ಪ್ರಧಾನಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ. ಮುಸ್ಲಿಂ ಮಹಿಳೆಯರು ಮತ್ತು ಅವರ ಗಂಡಂದಿರ ನಡುವೆ ಬಿರುಕು ಸೃಷ್ಟಿಸಿ ಹೊಸ ಮತ ಬ್ಯಾಂಕ್‌ ಸೃಷ್ಟಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಬಿಜೆಪಿ ಮತ್ತು ಅದರ ಸಿದ್ಧಾಂತ ರೂಪಿಸಿರುವ ಆರ್‌ಎಸ್‌ಎಸ್ ಬಿಟ್ಟು ಬೇರೆ ಯಾರೂ ತಲಾಖನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಬಯಸುತ್ತಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ಮುಸ್ಲಿಂ ಸಮಾಜ ತ್ರಿವಳಿ ತಲಾಖ್‌ ಬಗ್ಗೆ ಚರ್ಚೆ ಆರಂಭಿಸಿದೆ. ತಲಾಖ್‌ ಬಗ್ಗೆ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಅಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಅವರ ಗಂಡಂದಿರ ನಡುವೆ ಬಿಜೆಪಿ ಅನಗತ್ಯ ಮಧ್ಯಪ್ರವೇಶ ನಡೆಸುತ್ತಿದೆ ಎಂದು ಆಜಾದ್‌ ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.