ADVERTISEMENT

ತುಂಡುಡುಗೆ ವಿದೇಶಿಯರೇ ಭಟ್ಕಳ ಗುರಿ

ಜಾಮಾ ಮಸೀದಿ ಸ್ಫೋಟ: ಕೋರ್ಟ್‌ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ತುಂಡುಡುಗೆ ತೊಟ್ಟ (ಮಿನಿ ಸ್ಕರ್ಟ್‌) ವಿದೇಶಿಯರು ಇಲ್ಲಿನ ಐತಿಹಾಸಿಕ ಜಾಮಾ ಮಸೀದಿಗೆ ಭೇಟಿ ಕೊಡುವುದು ಇಂಡಿಯನ್‌ ಮುಜಾಹಿದ್ದೀನ್‌ (ಐಎಂ) ಸಹಸಂಸ್ಥಾಪಕ ಯಾಸೀನ್‌ ಭಟ್ಕಳ ಹಾಗೂ ಆತನ ಸಹಚರರಿಗೆ ಸರಿ ಕಾಣುತ್ತಿರಲಿಲ್ಲ. ಈ ಕಾರಣದಿಂದಲೇ ಇವರು 2010ರ ಸೆಪ್ಟೆಂಬರ್‌ನಲ್ಲಿ ಈ ಮಸೀದಿಯ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದರು ಎಂದು ದೆಹಲಿ ಪೊಲೀಸ್‌ ವಿಶೇಷ ಘಟಕ ಬುಧವಾರ ಕೋರ್ಟ್‌ಗೆ ತಿಳಿಸಿದೆ.

‘ತುಂಡು ಉಡುಗೆ ಧರಿಸುವುದು ಇಸ್ಲಾಂಗೆ ನಿಷಿದ್ಧ ವಾದುದು.  ಇದೇ ಕಾರಣಕ್ಕೆ ಭಟ್ಕಳ ಹಾಗೂ ಆತನ ಬಂಟರು ಮಸೀದಿಯಲ್ಲಿ ವಿದೇಶಿಯರನ್ನು ಗುರಿಯಾ­ಗಿಸಿಕೊಂಡು ದಾಳಿ ಎಸಗಿದ್ದರು’ ಎಂದು ಯಾಸೀನ್‌ ಭಟ್ಕಳ ಹಾಗೂ ಆತನ ಸಹಚರ ಅಸಾದುಲ್ಲಾ ಅಖ್ತರ್‌ ವಿರುದ್ಧ ಸಲ್ಲಿಸಿರುವ  ಆರೋಪಪಟ್ಟಿಯಲ್ಲಿ ಪೊಲೀಸರು ತಿಳಿಸಿದ್ದಾರೆ.

‘ದಾಳಿ ನಡೆಸಲು ಆಯಕಟ್ಟಿನ ಜಾಗ ಯಾವುದು ಎಂದು ತಿಳಿದುಕೊಳ್ಳಲು ಯಾಸೀನ್‌ ಮಸೀದಿಗೆ ಬಂದಿದ್ದ. ತುಂಡು ಉಡುಗೆ ತೊಟ್ಟ ವಿದೇಶಿಯರು ಮೂರನೇ ದ್ವಾರವನ್ನೇ ಹೆಚ್ಚಾಗಿ ಬಳಸುತ್ತಾರೆ ಎನ್ನುವುದು ಆತನ ಗಮನಕ್ಕೆ ಬಂತು.  ಆದ್ದರಿಂದ ದಾಳಿ ನಡೆಸುವುದಕ್ಕೆ ಅದೇ ಜಾಗ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದ್ದ’ ಎಂದೂ ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ.

ಈ ದಾಳಿಯಲ್ಲಿ ಥೈವಾನ್‌ನ ಇಬ್ಬರು ಪ್ರಜೆಗಳು ಗಾಯಗೊಂಡಿದ್ದರು.  

‘ಬೈಕ್‌ನಲ್ಲಿ ಬಂದ  ದಾಳಿ­ಕೋರರು ಮಸೀದಿಯ ಮೂರನೇ ದ್ವಾರವನ್ನು ಹೆಚ್ಚಾಗಿ ಬಳಸುವ ವಿದೇಶಿಯರನ್ನು ಗುರಿಯಾಗಿಸಿ ಕೊಂಡು ಗುಂಡಿನ ದಾಳಿ ನಡೆಸಿದ್ದರು’ ಎಂದೂ ಪೊಲೀಸರು ಆರೋಪಪಟ್ಟಿಯಲ್ಲಿ ವಿವರಿಸಿದ್ದಾರೆ.

2010ರ ಫೆಬ್ರುವರಿ 13ರಂದು ಪುಣೆಯ ಜರ್ಮನಿ ಬೇಕರಿಯಲ್ಲಿ ಬಾಂಬ್‌ ಸ್ಫೋಟ ನಡೆದಿತ್ತು. ಇದಾದ ಐದು ತಿಂಗಳ ಬಳಿಕ, ಅಂದರೆ  2010ರ ಆಗಸ್ಟ್‌ 1ರಂದು  ಪಹರ್‌ಗಂಜ್‌ನ ಜರ್ಮನ್‌ ಬೇಕರಿಯಲ್ಲಿ ದಾಳಿ ನಡೆಸಲು ಯಾಸೀನ್‌ ಸಂಚು ಮಾಡಿದ್ದ. ಈ ಸಂಚಿನಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ  ಆಕಸ್ಮಿಕ ವಾಗಿ ಗುಂಡು ಹಾರಿ ಗಾಯಗೊಂಡ ಕಾರಣ ಸಂಚು ವಿಫಲವಾಗಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.

2010ರ ಫೆ.13ರಂದು ಪುಣೆಯ ಜರ್ಮನ್‌ ಬೇಕರಿಯಲ್ಲಿ ಶಕ್ತಿಶಾಲಿ ಸ್ಫೋಟ ಸಂಭವಿಸಿ 17 ಜನ  ಸತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.