ADVERTISEMENT

ದಲಾಯಿ ಲಾಮಾ ಉತ್ತರಾಧಿಕಾರಿ ವಿವಾದ

ಚೀನಾ ಮತ್ತು ಟಿಬೆಟ್‌ ದೇಶಾಂತರ ಸರ್ಕಾರದ ನಡುವೆ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 19:42 IST
Last Updated 2 ಸೆಪ್ಟೆಂಬರ್ 2015, 19:42 IST

ನವದೆಹಲಿ: ಬೌದ್ಧರ ಪರಮೋಚ್ಛ ಗುರು ದಲಾಯಿಲಾಮಾ ಉತ್ತರಾಧಿಕಾರಿ ನೇಮಕ ವಿವಾದ ಚೀನಾ ಹಾಗೂ ಬೌದ್ಧ ಧರ್ಮೀಯರ ನಡುವೆ ಸಂಘರ್ಷಕ್ಕೆ ನಾಂದಿ ಹಾಡಿದೆ. 

ಟಿಬೆಟ್ ಮೇಲೆ ಕಾನೂನು ಬದ್ಧ ಹಿಡಿತ ಸಾಧಿಸುವ ಹವಣಿಕೆಯಲ್ಲಿರುವ ಚೀನಾದ ಕಮ್ಯುನಿಸ್ಟ್‌ ಸರ್ಕಾರ ಒಂದು ವೇಳೆ  ದಲಾಯಿಲಾಮಾ ಉತ್ತರಾಧಿಕಾರಿ ನೇಮಕಕ್ಕೆ ಮುಂದಾದಲ್ಲಿ ಜಾಗತಿಕ ಮಟ್ಟದಲ್ಲಿ  ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಭಾರತದಲ್ಲಿರುವ ಟಿಬೆಟ್‌ ದೇಶಾಂತರ ಸರ್ಕಾರ ಎಚ್ಚರಿಕೆ ನೀಡಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಟಿಬೆಟ್‌ ಭೂಗತ ಸರ್ಕಾರ, ಈ ಸಂಬಂಧ ಇತ್ತೀಚೆಗೆ ಚೀನಾಕ್ಕೆ ಎಚ್ಚರಿಕೆ ನೋಟಿಸ್‌ ನೀಡಿದೆ.

‌‌‘ಲಾಮಾ ನೇಮಕ ವಿಷಯದಲ್ಲಿ  ಚೀನಾ ಮೂಗು ತೂರಿಸಿದರೆ  ಟಿಬೆಟ್‌ ಮಾತ್ರವಲ್ಲ, ವಿಶ್ವದಾದ್ಯಂತ ಇರುವ ಲಕ್ಷಾಂತರ ಬೌದ್ಧರ ವಿರೋಧ ಎದುರಿಸಬೇಕಾಗುತ್ತದೆ ಎಂದು ಟಿಬೆಟ್ ಕೇಂದ್ರಾಡಳಿತ ಎಚ್ಚರಿಕೆ ನೀಡಿದೆ. ಕೆಲವು ತಿಂಗಳ ಹಿಂದೆ ಚೀನಾ ಸರ್ಕಾರ ಹೊರಡಿಸಿದ ಶ್ವೇತಪತ್ರದಲ್ಲಿ ಟಿಬೆಟ್ ಕುರಿತ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಬೆನ್ನಲ್ಲೇ ಟಿಬೆಟ್ ಭೂಗತ ಸರ್ಕಾರದ ಈ ತೀಕ್ಷ್ಣ ಪ್ರತಿಕ್ರಿಯೆ ಹೊರಬಿದ್ದಿದೆ.

ದಲಾಯಿಲಾಮಾ ಅವರ ಪ್ರತ್ಯೇಕತಾವಾದದ ವಿರುದ್ಧ ಚೀನಾ ಹೋರಾಟ ಮುಂದುವರಿಯಲಿದೆ ಎಂದು  ಅಧ್ಯಕ್ಷ ಕ್ಸಿ ಜಿನ್‌ಪಿಂಗ್  ಇತ್ತೀಚೆಗೆ ಬಹಿರಂಗ ಹೇಳಿಕೆಯನ್ನೂ ನೀಡಿದ್ದರು. ಹಾಲಿ ಹಾಗೂ 14ನೇ ದಲಾಯಿ ಲಾಮಾ ತೆಂಜಿನ್ ಗ್ಯಾಸ್ಟೋ 80 ವರ್ಷದವರಾಗಿರುವ ಕಾರಣ ಬೌದ್ಧ ಸಂಪ್ರದಾಯದ ಪ್ರಕಾರ ಉತ್ತರಾಧಿಕಾರಿಯನ್ನು ನೇಮಕ ಮಾಡಬೇಕಿದೆ.  ಹೀಗಾಗಿ ಚೀನಾ ತನ್ನ ಮಾತು ಕೇಳುವ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.