ADVERTISEMENT

ನಿತೀಶ್‌ ದುರಹಂಕಾರಿ: ಮೋದಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ಬಂಕಾ (ಬಿಹಾರ), (ಪಿಟಿಐ):  ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌  ಅತ್ಯಂತ ದುರಂಹಕಾರದ ಮನುಷ್ಯ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ರಾಜ್ಯದ ಭವಿಷ್ಯ ಬದಲಾಯಿಸುವುದಕ್ಕೆ ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿ ಬೆಂಬಲಿಸಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಬಿಹಾರದಲ್ಲಿ ತಮ್ಮ ಮೊದಲ ರ್‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವಲಸೆ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿ ಬಡವರು ಮತ್ತು ಯುವಜನರ ಮನ ಗೆಲ್ಲುವುದಕ್ಕೆ ಯತ್ನಿಸಿದರು.ಬಿಹಾರಕ್ಕೆ ಕೇಂದ್ರ ಸರ್ಕಾರವು ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್‌್ ಅನುಮಾನಿಸಿದ ಎದುರಾಳಿಗಳ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ ಅವರು,        ‘ನಾನು ಈ ರಾಜ್ಯಕ್ಕೆ ಬಿಡುಗಡೆ ಮಾಡಿದ ₹ 1.65 ಲಕ್ಷ ಕೋಟಿ ಪ್ಯಾಕೇಜ್‌್ ಹಣವನ್ನು ಕೆಲವರು ಅನುಮಾನಿಸಿದ್ದಾರೆ. ಈ ಹಣ ಬರುತ್ತದೆಯೇ ಇಲ್ಲವೇ ಎಂದು  ಪ್ರಶ್ನಿಸಿದ್ದಾರೆ. ಈಗಿನ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ರೂಪಾಯಿ ಕೊಟ್ಟರೆ ಅದು ನಿಮ್ಮನ್ನು ತಲುಪುತ್ತದೆಯೇ’ ಎಂದು ಪ್ರಶ್ನಿಸಿದರು.

‘ಒಂದು ವೇಳೆ ನಾನು ಈ ಹಣವನ್ನು ಕೊಟ್ಟೆ ಎಂದಿಟ್ಟುಕೊಳ್ಳಿ. ಆದರೆ ಅವರಿಗೆ  (ನಿತೀಶ್‌) ಎಷ್ಟು ದುರಹಂಕಾರ ಇದೆ ಎಂದರೆ ಆ ಹಣವನ್ನು ಮೋದಿ ಕೊಟ್ಟಿದ್ದು ಎಂದು ಸ್ವೀಕರಿಸದೇ ವಾಪಸ್‌ ಕೊಡಲೂ ಬಹುದು. ನಾನು ಅವರನ್ನು ನಂಬುವುದಿಲ್ಲ’ ಎಂದರು.
ಈ ಹಿಂದೆ ಕೋಸಿ ಪ್ರವಾಹದ ಸಂದರ್ಭದಲ್ಲಿ ಬಿಹಾರಕ್ಕೆ ಗುಜರಾತ್‌ ನೀಡಿದ್ದ ₹5 ಕೋಟಿ ಪರಿಹಾರವನ್ನು ನಿತೀಶ್‌್ ಸಿಟ್ಟಿನಿಂದ ವಾಪಸ್‌್ ನೀಡಿದ್ದನ್ನು ಮೋದಿ ಇಲ್ಲಿ ಪ್ರಸ್ತಾಪಿಸಿದರು.

‘ಮುಖ್ಯಮಂತ್ರಿ ಗಾದಿಗೆ ಸ್ವತಃ ತಾವೇ ಆಯ್ಕೆ ಮಾಡಿ ಆ ಮೇಲೆ ನಿಮ್ಮನ್ನು  ಕೆಳಗೆ ಇಳಿಸಿದ ನಿತೀಶ್‌ ಅವರನ್ನು ನಂಬುತ್ತೀರಾ’ ಎಂದು ವೇದಿಕೆಯಲ್ಲಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರನ್ನು ಕೇಳಿದರು. ಬಿಹಾರವು ಊಳಿಗಮಾನ್ಯ ಪದ್ಧತಿ, ಬಂಡವಾಳಶಾಹಿ ವ್ಯವಸ್ಥೆ, ಸ್ವಜನಪಕ್ಷಪಾತ, ಪ್ರತ್ಯೇಕತವಾದಗಳನ್ನು ಕಂಡಿದೆ. ಈಗ ಈ ರಾಜ್ಯದ ಜನರು ‘ವಿಕಾಸವಾದ’ಕ್ಕೆ (ಅಭಿವೃದ್ಧಿಗೆ) ಮತ ಹಾಕಬೇಕು ಎಂದರು.

‘ಈಗಿನ ಸರ್ಕಾರ ನಿಮ್ಮ ಮತ ಪಡೆಯುವುದಕ್ಕೆ ಯೋಗ್ಯವೇ? ನಾನು ಬಿಹಾರವನ್ನು ಇತರ  ರಾಜ್ಯಗಳ ಜತೆ ಹೋಲಿಸುತ್ತಿಲ್ಲ. ನಾನು ಈ ರಾಜ್ಯವನ್ನು ಜಾರ್ಖಂಡ್‌ ಜತೆಗೆ ಮಾತ್ರ ಹೋಲಿಸುತ್ತೇನೆ. 10ರಿಂದ 15ವರ್ಷಗಳ ಹಿಂದೆ ಬಿಹಾರ ಹಾಗೂ ಜಾರ್ಖಂಡ್‌ ಒಂದೇ ಆಗಿದ್ದವು. ಆದರೆ ಜಾರ್ಖಂಡ್‌ ಸರ್ಕಾರವು ಈಗ ಯಾವ ರೀತಿಯಲ್ಲಿ  ಸಾಧಿಸಿದೆ ನೋಡಿ’ ಎಂದು ಮೋದಿ ಹೇಳಿದರು.

‘ವಿಶ್ವ ಬ್ಯಾಂಕ್‌ ಸಮೀಕ್ಷೆ ಬಗ್ಗೆ ಮಾತನಾಡೋಣ. ಅದರ ಪ್ರಕಾರ  ಜಾರ್ಖಂಡ್‌ 29 ಹಾಗೂ ಬಿಹಾರ 27 ನೇ ಸ್ಥಾನದಲ್ಲಿ ಇದ್ದವು. ಎರಡು ವಾರಗಳ ಹಿಂದೆ ಇನ್ನೊಂದು ಸಮೀಕ್ಷೆ ಬಂತು. ಅದರ ಪ್ರಕಾರ ಬಿಹಾರ 27ನೇ ಸ್ಥಾನದಲ್ಲಿಯೇ ಇದೆ.  ಆದರೆ ಜಾರ್ಖಂಡ್‌ 3 ನೇ ಸ್ಥಾನಕ್ಕೆ ಏರಿದೆ. ನಿಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಿ. ನಿಮ್ಮ ಪ್ರತಿಯೊಂದು ಹೆಜ್ಜೆಯೊಂದಿಗೂ ನಾನು ಇರುತ್ತೇನೆ’ ಎಂದು ಮೋದಿ ಮತದಾರರನ್ನು ಓಲೈಸುವ ಕಸರತ್ತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.