ADVERTISEMENT

ಪರಮಾಣು ಕಗ್ಗಂಟಿಗೆ ಸಿಕ್ಕ ಪರಿಹಾರ

ನರೇಂದ್ರ ಮೋದಿ– ಒಬಾಮ ಮಹತ್ವದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2015, 20:27 IST
Last Updated 25 ಜನವರಿ 2015, 20:27 IST

ನವದೆಹಲಿ (ಪಿಟಿಐ): ಆರು ವರ್ಷಗಳಿಂದ ನನೆ­ಗುದಿಗೆ ಬಿದ್ದಿದ್ದ ಚಾರಿತ್ರಿಕ ನಾಗರಿಕ ಪರಮಾಣು ಒಪ್ಪಂದ ಜಾರಿಗೆ ಚಾಲನೆ ನೀಡುವಲ್ಲಿ ಭಾರತ ಮತ್ತು ಅಮೆರಿಕ ಭಾನುವಾರ ಯಶಸ್ವಿ­ಯಾದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಇಲ್ಲಿ ಮಾತುಕತೆ ನಡೆಸಿದ ನಂತರ ‘ಒಪ್ಪಂದ ಯಶಸ್ವಿ­ಯಾಗಿದೆ’ ಎಂದು  ಜಂಟಿಯಾಗಿ ಘೋಷಿಸ­ಲಾಯಿತು.

ಇದೇ ವೇಳೆ, ದೇಶೀಯ ರಕ್ಷಣಾ ಉದ್ದಿಮೆ­ಯನ್ನು ಆಧುನಿಕ ತಂತ್ರಜ್ಞಾನದ ಬಲದಿಂದ ಮೇಲ್ದರ್ಜೆಗೆ ಏರಿಸಿ ರಕ್ಷಣಾ ಸಹಕಾರವನ್ನು ಹೊಸ ಸ್ತರಕ್ಕೆ ಕೊಂಡೊಯ್ಯಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ.

‘ಎರಡು ರಾಷ್ಟ್ರಗಳ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ನಾವು ಈಗ ವಾಣಿಜ್ಯ ಸಹಕಾರದತ್ತ ಮುನ್ನಡೆಯುತ್ತಿದ್ದೇವೆ. ನಮ್ಮ ನೆಲದ ಕಾನೂನು, ಅಂತರರಾಷ್ಟ್ರೀಯ ನಿಬಂಧನೆಗಳು, ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧುತ್ವಕ್ಕೆ ಅನುಗುಣವಾಗಿ ಹೆಜ್ಜೆ ಇರಿಸಿದ್ದೇವೆ’ ಎಂದು ಮೋದಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಯೋತ್ಪಾದನೆ : ಸಂಘಟಿತ ಯತ್ನಕ್ಕೆ ಒತ್ತಾಯ
ಭಯೋತ್ಪಾದನೆ ದಮನವು ಇವತ್ತು ಜಗತ್ತಿನ ಮುಂದಿರುವ ಬಹು ದೊಡ್ಡ ಸವಾಲಾಗಿದೆ. ಲಷ್ಕರ್‌ ಎ ತಯಬಾ, ಡಿ ಕಂಪೆನಿ (ದಾವೂದ್‌ ಕಂಪೆನಿ), ಹಖಾನಿ ಜಾಲ ಸೇರಿದಂತೆ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ಸಂಘಟಿತ ಪ್ರಯತ್ನಗಳು ಅಗತ್ಯ ಎಂದು ಭಾರತ ಮತ್ತು ಅಮೆರಿಕ ಒತ್ತಿ ಹೇಳಿವೆ. ಮುಂಬೈ ಮೇಲಿನ ೨೬/೧೧ರ ದಾಳಿಕೋರರಿಗೆ ಕಾನೂನು ಶಿಕ್ಷೆಯಾಗುವಂತೆ ಪಾಕಿಸ್ತಾನ ಕ್ರಮ ತೆಗೆದುಕೊಳ್ಳಬೇಕು ಎಂದೂ ಉಭಯ ರಾಷ್ಟ್ರಗಳು ಒತ್ತಾಯಿಸಿವೆ.

‘ನಾಗರಿಕ ಪರಮಾಣು ಒಪ್ಪಂದದ ವಿಷಯವು ನಮ್ಮ ಬದಲಾಗಿರುವ ಬಾಂಧವ್ಯದ ಕೇಂದ್ರಬಿಂದುವಾಗಿತ್ತು. ಈಗ ಒಪ್ಪಂದ ಜಾರಿಗೆ ನಿರ್ಧರಿಸಿರುವುದು ಹೊಸ ವಿಶ್ವಾಸವನ್ನು ಎತ್ತಿ­ತೋರಿ­ಸಿದೆ. ಇದರಿಂದ ಹೊಸ ಆರ್ಥಿಕ ಅವಕಾಶ­ಗಳು ಸೃಷ್ಟಿಯಾಗುವ ಜತೆಗೆ ಶುದ್ಧ ಇಂಧನದ ಆಯ್ಕೆ ಸಾಧ್ಯತೆ ಕೂಡ ಅಧಿಕವಾಗಲಿದೆ. ಇದಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ಯೋಜಿತ­ವಾಗಿ ಪರಿಶ್ರಮ ಹಾಕಿದ್ದೆವು’ ಎಂದರು.

ಒಬಾಮ ಅವರು ನಾಗರಿಕ ಪರಮಾಣು ಒಪ್ಪಂದ ಜಾರಿಗೆ ಇದ್ದ ತೊಡಕು ನಿವಾರಣೆ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ, ‘ಇದು ಮಹತ್ವದ ಪ್ರಗತಿ’ ಎಂದು ಬಣ್ಣಿಸಿದರು.

ADVERTISEMENT

ಪರಮಾಣು ದುರಂತವೇನಾದರೂ ಸಂಭವಿಸಿ­ದರೆ ಭರಿಸಬೇಕಾದ ನಷ್ಟ ಮತ್ತು ನೀಡಬೇಕಾದ ಪರಿಹಾರಕ್ಕೆ ಯಾರು ಬಾಧ್ಯಸ್ಥರಾ­ಗಬೇಕು ಹಾಗೂ ಉದ್ದೇಶಿತ ಪರಮಾಣು ಸ್ಥಾವರಗಳಿಗೆ ಅಮೆರಿಕ ಮತ್ತಿತರ ದೇಶಗಳಿಂದ ಸರಬರಾ­ಜಾಗುವ ಇಂಧನದ ಮೇಲೆ ನಿಗಾ ಇರಿಸುವ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರ­ಗಳ ನಡುವೆ ಇದ್ದ ಭಿನ್ನಾಭಿ­ಪ್ರಾಯಗಳಿಗೆ ಪರಿ­ಹಾರ ಕಂಡುಕೊಂಡಿರುವುದಾಗಿ ಹೇಳಲಾಗಿದೆ.

ಈಗ ಒಪ್ಪಂದ ಜಾರಿಗೆ ಎರಡೂ ರಾಷ್ಟ್ರಗಳು ನಿರ್ಧರಿಸಿದ್ದರೂ ಪರಮಾಣು ದುರಂತ ಬಾಧ್ಯತೆ ಸಂಬಂಧ ಇದ್ದ ತೊಡಕನ್ನು ಹೇಗೆ ನಿವಾರಿಸಿ­ಕೊಂಡಿವೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಪರಮಾಣು ಅವಘಡ ಸಂಭವಿಸಿದರೆ ರಿಯಾ­ಕ್ಟರ್‌ ಪೂರೈಸುವ ರಾಷ್ಟ್ರವೇ ನಷ್ಟ ಭರಿಸುವ ಜತೆಗೆ ಪರಿಹಾರ ನೀಡುವ ಹೊಣೆ ಹೊರಬೇಕು ಎಂಬುದು ಭಾರತದ ವಾದವಾಗಿತ್ತು. ಆದರೆ, ಜಾಗತಿಕ ನಿಯಮಗಳ ಪ್ರಕಾರ ಸ್ಥಾವರವನ್ನು ನಿರ್ವಹಿಸುವ ರಾಷ್ಟ್ರವೇ ಈ ಹೊಣೆ ಹೊರ­ಬೇಕು ಎಂದು ಅಮೆರಿಕ, ಫ್ರಾನ್ಸ್‌ ಮತ್ತಿತರ ರಾಷ್ಟ್ರಗಳು ಪಟ್ಟುಹಿಡಿದಿದ್ದವು.

ಉದ್ದೇಶಿತ ಪರಮಾಣು ಸ್ಥಾವರಗಳಿಗೆ ಯಾವುದೇ ರಾಷ್ಟ್ರದಿಂದ ಪೂರೈಕೆಯಾಗುವ ಇಂಧನದ ಮೇಲೆ ನಿಗಾ ಇರಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ಅಮೆರಿಕದ ಮತ್ತೊಂದು ಒತ್ತಾಯವಾಗಿತ್ತು. ಆದರೆ ಇದನ್ನು ಒಪ್ಪದ ಭಾರತವು, ಯಾವುದೇ ದೇಶದ ವಿಷಯದಲ್ಲಿ ಬೇರೊಂದು ರಾಷ್ಟ್ರಕ್ಕೆ ಹೀಗೆ ಮೂಗು ತೂರಿಸಲು ಅವಕಾಶ ಇರಬಾರದು ಎಂದು ವಾದಿಸಿತ್ತು. ಈ ವಿಷಯದಲ್ಲಿ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ಸುರಕ್ಷಾ ನೀತಿಗಳಿಗೆ ಮಾತ್ರ ತಾನು ಬದ್ಧವಾಗಿರುವುದಾಗಿ ಭಾರತ ಪ್ರಕಟಿಸಿತ್ತು.

ಮತ್ತೊಂದು ಮುಖ್ಯ ವಿಷಯವಾದ ವಿಮೆ ಬಾಧ್ಯಸ್ಥಿಕೆ ನಿಬಂಧನೆಗೆ ಸಂಬಂಧಿಸಿದಂತೆ ಅಮೆ­ರಿಕದ ಪರಮಾಣು ರಿಯಾಕ್ಟರ್‌ಗಳ ತಯಾರ­ಕರನ್ನು ನಷ್ಟದ ಹೊಣೆಯಿಂದ ಮುಕ್ತಗೊಳಿಸುವ ಸಲುವಾಗಿ ನಿಧಿ ಸ್ಥಾಪಿಸುವುದಾಗಿ ಭಾರತ ಹೇಳುತ್ತಾ ಬಂದಿತ್ತು.

‘ರಕ್ಷಣಾ ರೂಪುರೇಷೆ ಒಪ್ಪಂದ’ವನ್ನು ಇನ್ನೂ ೧೦ ವರ್ಷಗಳ ಅವಧಿಗೆ ನವೀಕರಿಸಲು ನಿರ್ಧರಿಸಲಾಗಿದೆ ಎಂದು ಒಬಾಮ ತಿಳಿಸಿದರು.
‘ನಮ್ಮ ರಕ್ಷಣಾ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ನಿರ್ದಿಷ್ಟ ರಕ್ಷಣಾ ಯೋಜನೆಗಳಿಗೆ ಸಂಬಂಧಿಸಿದಂತೆ ಜಂಟಿ ಅಭಿವೃದ್ಧಿ ಮತ್ತು ಜಂಟಿ ಉತ್ಪಾದನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ನಮ್ಮ ದೇಶೀಯ ರಕ್ಷಣಾ ಉದ್ದಿಮೆಯನ್ನು ಮೇಲ್ದರ್ಜೆಗೆ ಏರಿಸಲು ಇದ­ರಿಂದ ಅನುಕೂಲವಾಗುತ್ತದೆ’ ಎಂದು ಮೋದಿ ಹೇಳಿದರು.

ಆಘ್ಘಾನಿಸ್ತಾನದಲ್ಲಿ ಪರಿವರ್ತನೆ ತರುವ ದಿಸೆಯಲ್ಲಿ ಹೇಗೆ ನೆರವಾಗಬಹುದೆಂಬ ಬಗ್ಗೆಯೂ ಇಬ್ಬರೂ ಚರ್ಚಿಸಿದೆವು ಎಂದೂ ಮೋದಿ ತಿಳಿಸಿದರು. ಈ ವಿಷಯದಲ್ಲಿ ಉಭಯ ರಾಷ್ಟ್ರಗಳೂ ಆಘ್ಘಾನಿಸ್ತಾನ ಜನತೆಯೊಂದಿಗೆ ಸದೃಢವಾಗಿ ನಿಲ್ಲಲಿವೆ ಎಂದು ಒಬಾಮ ಹೇಳಿದರು.

ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಕುರಿತು ಮಾತುಕತೆ ನಡೆಸಲು ಹಾಗೂ ಆರ್ಥಿಕ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ಇಬ್ಬರೂ ನಾಯಕರು ತಿಳಿಸಿದರು.

ಶ್ವೇತಭವನ ಪ್ರಕಟಣೆ: ಇದೇ ವೇಳೆ ಅಮೆರಿಕದ ಶ್ವೇತಭವನವು ಪ್ರಕಟಣೆ ಹೊರಡಿಸಿ, ‘ಪರಮಾಣು ದುರಂತ ಬಾಧ್ಯತೆ ಮತ್ತು ಪರಮಾಣು ಇಂಧನ ಪೂರೈಕೆ ಮೇಲೆ ನಿಗಾ ಇರಿಸುವುದಕ್ಕೆ ಸಂಬಂಧಿ­ಸಿದಂತೆ ತನ್ನ ಪ್ರತಿಪಾದನೆಗಳಿಗೆ ಭಾರತದೊಂದಿಗೆ ಏರ್ಪಟ್ಟಿರುವ ಒಪ್ಪಂದದಲ್ಲಿ ಪರಿಹಾರ ಸಿಕ್ಕಿದೆ’ ಎಂದು ಹೇಳಿದೆ.

‘ಈ ವಿಷಯಗಳಿಗೆ ಸಂಬಂಧಿಸಿದಂತೆ ಭಾರತವು ತನ್ನ ನಿಲುವುಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ನಮಗೆ ಭರವಸೆಗಳನ್ನು ನೀಡಿದೆ ಎಂಬುದು ನಮ್ಮ ಅಭಿಪ್ರಾಯ’ ಎಂದು ಭಾರತದಲ್ಲಿ ಅಮೆರಿಕ ರಾಯ ಭಾರಿಯಾಗಿರುವ ರಿಚರ್ಡ್‌ ವರ್ಮ  ಹೇಳಿದ್ದಾರೆ.
‘ಮಾರುಕಟ್ಟೆ ಪರಿಸ್ಥಿತಿ ಅವಲೋಕಿಸಿ ಭಾರತದ ಪರಮಾಣು ಯೋಜನೆಗಳಲ್ಲಿ ಭಾಗಿಯಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅಮೆರಿ­ಕದ ಕಂಪೆನಿಗಳಿಗೆ ಬಿಟ್ಟ ವಿಷಯ’ ಎಂದು ಒಬಾಮ ಅವರ ಸಹಾಯಕ ಬೆನ್‌ ರೋಡ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಎರಡೂ ರಾಷ್ಟ್ರಗಳ ನಡುವೆ ೨೦೦೫ರಲ್ಲಿ ಏರ್ಪಟ್ಟ ಪರಮಾಣು ಒಪ್ಪಂದದ ಜಾರಿಯು ವಿಪತ್ತು ಬಾಧ್ಯತೆಗೆ ಸಂಬಂಧಿಸಿದ ಸಂಕೀರ್ಣ ವಿಷಯ­ದಿಂದಾಗಿ ಕಗ್ಗಂಟಾಗಿ ಹೋಗಿತ್ತು. ಆಗಿನ ಆಮೆರಿಕ ಅಧ್ಯಕ್ಷ ಜಾರ್ಜ್‌ ಬುಷ್‌ ಮತ್ತು ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಇದಕ್ಕೆ ಸಹಿ ಹಾಕಿದ್ದರು.

ಭಾರತದ ಕಾನೂನಿನ ಪ್ರಕಾರ, ಪರಮಾಣು ಸ್ಥಾವರಗಳಲ್ಲಿ ಅವಘಡ­ವೇನಾದರೂ ಸಂಭವಿಸಿದರೆ ಪರಮಾಣು ರಿಯಾಕ್ಟರ್‌ಗಳನ್ನು ಪೂರೈಸುವ ರಾಷ್ಟ್ರವೇ ಅದರ ಹೊಣೆ­ಯನ್ನು ಹೊರ ಬೇಕಾಗುತ್ತದೆ. ಆದರೆ ಜಾಗತಿಕ ನಿಯಮಗಳ ಪ್ರಕಾರ ಸ್ಥಾವರ ನಿರ್ವಹಿಸುವ ದೇಶವೇ ಅದರ ಹೊಣೆ ಹೊರಬೇಕಾಗುತ್ತದೆ ಎಂಬುದು ಅಮೆರಿಕ, ಫ್ರಾನ್‌್ಸ ಮತ್ತಿತರ ಕೆಲವು ರಾಷ್ಟ್ರಗಳ ವಾದವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.