ADVERTISEMENT

ಪ್ರಖ್ಯಾತ ಚಿತ್ರ ನಿರ್ದೇಶಕ ರಿತುಪರ್ಣೋ ಘೋಷ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 30 ಮೇ 2013, 12:38 IST
Last Updated 30 ಮೇ 2013, 12:38 IST
-ಪಿಟಿಐ ಸಂಗ್ರಹ ಚಿತ್ರ
-ಪಿಟಿಐ ಸಂಗ್ರಹ ಚಿತ್ರ   

ಕೋಲ್ಕತ್ತಾ (ಪಿಟಿಐ): ಪ್ರಖ್ಯಾತ ಚಲನಚಿತ್ರ ನಿರ್ದೇಶಕ ರಿತುಪರ್ಣೋ ಘೋಷ್ ಅವರು ಕೋಲ್ಕತ್ತಾದಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು.

ಇವರಿಗೆ 49 ವರ್ಷ ವಯಸ್ಸಾಗಿತ್ತು. ಪ್ಯಾಂಕ್ರಿಯಾಟಿಸ್ (ಮೇದೋಜಿರಕಗ್ರಂಥಿಯ ಉರಿಯೂತ) ಕಾಯಿಲೆಯಿಂದ ಬಳಲುತ್ತಿದ್ದ ಇವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಬಂಗಾಳಿ ಚಿತ್ರಗಳ ಜೊತೆಗೆ ಕೆಲವು ಹಿಂದಿ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅವರ ಚಿತ್ರಗಳಿಗೆ ಹಲವು ದೇಶ ವಿದೇಶಗಳ ಹಲವು ಪ್ರಶಸ್ತಿಗಳು ದೊರೆತಿವೆ.

ಜಾಹೀರಾತು ನಿರ್ದೇಶನದ ಮುಖಾಂತರ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟ ಇವರು, 1994ರಲ್ಲಿ ಮಕ್ಕಳ ಚಿತ್ರ `ಹಿರೇರ್ ಅಂಗಟಿ'ಯನ್ನು ನಿರ್ದೇಶಿಸಿದರು. ಮರುವರ್ಷ ಅಂದರೆ 1995ರಲ್ಲಿ ತೆರೆ ಕಂಡ ಇವರ `ಯುನೀಶೆ ಏಪ್ರಿಲ್' ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಯಿತು.

ದಹಾನ್, ಅಸುಖ್, ಚೋಕರ್ ಬಾಲಿ, ರೇನ್ ಕೋಟ್, ಬಾರಿವಾಲಿ, ಅಂತರ್‌ಮಹಲ್, ನೌಕಾದುಬಿ ಅವರ ಕೆಲವು ಜನಪ್ರಿಯ ಚಿತ್ರಗಳು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಅವರು ಘೋಷ್ ಅವರ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. `ರಿತುಪರ್ಣೋ ಅವರು ಇಲ್ಲವೆಂದರೆ ನನಗೆ ನಂಬುವುದಕ್ಕೆ ಆಗುವುದಿಲ್ಲ. ಉತ್ತಮ ಚಿತ್ರನಿರ್ದೇಶಕರನ್ನು ನಾವು ತುಂಬಾ ಬೇಗ ಕಳೆದುಕೊಂಡಿದ್ದೇವೆ' ಎಂದು ಕಂಬಿನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.