ADVERTISEMENT

ಬಂಡವಾಳ ಹೂಡಿಕೆಗೆ ರಕ್ಷಣಾ ಕ್ಷೇತ್ರ ಮುಕ್ತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2014, 19:30 IST
Last Updated 9 ಜೂನ್ 2014, 19:30 IST

ನವದೆಹಲಿ (ಪಿಟಿಐ): ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಖಾಸಗಿ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸರ್ಕಾರ ಮುಕ್ತ ಅವಕಾಶ ನೀಡಲಿದೆ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಕಟಿಸಿದ್ದಾರೆ.

ರಕ್ಷಣಾ ಕ್ಷೇತ್ರದ ಬಲವರ್ಧನೆ ಹಾಗೂ ಸ್ವಾವಲಂಬನೆ ದೃಷ್ಟಿಯಿಂದ ಸರ್ಕಾರ  ಹೊಸ ನೀತಿಗಳನ್ನು  ಜಾರಿ­ಗೊಳಿಸಲಿದೆ ಎಂದರು.
ಸೇನೆಯ  ಆಧುನೀಕರಣ, ರಾಷ್ಟ್ರೀಯ ನೌಕಾ ಪ್ರಾಧಿಕಾರ ರಚನೆ,  ಜಾಗತಿಕ ರಕ್ಷಣಾ ಮಾರುಕಟ್ಟೆಯಾಗಿ ಭಾರತ ಅಭಿವೃದ್ಧಿ ಸೇರಿದಂತೆ ಅನೇಕ  ಯೋಜನೆಗಳನ್ನು ಅವರು ಇದೇ ವೇಳೆ ಪ್ರಕಟಿಸಿದರು. ಸ್ವಚ್ಛ, ಪರಿಣಾಮಕಾರಿ ಹಾಗೂ ಭ್ರಷ್ಟಾಚಾರ ಮುಕ್ತ ಪಾರ­ದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದ್ದು ಲೋಕಪಾಲ  ಕಾಯ್ದೆ ಅಡಿ ಕಾನೂನು ರೂಪಿಸಲಾಗುವುದು  ಎಂದು ಅವರು ಹೇಳಿದರು.

ಎಲ್ಲರಿಗೂ ಸುಲಭವಾಗಿ ಕೈಗೆಟಕುವ ಪರಿಣಾಮಕಾರಿ ಹಾಗೂ ಜಾಗತಿಕ ಮಟ್ಟದ ಆರೋಗ್ಯ ಸೌಲಭ್ಯ ಕಲ್ಪಿಸಲು ಹೊಸ ಆರೋಗ್ಯ ನೀತಿ ರೂಪಿಸಲಾಗು­ವುದು.  ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾದರಿ ಆಸ್ಪತ್ರೆಗಳನ್ನು ಹಂತ, ಹಂತ­ವಾಗಿ ಎಲ್ಲ ರಾಜ್ಯಗಳಲ್ಲೂ ಸ್ಥಾಪಿಸ­ಲಾಗು­ವುದು ಎಂದು  ಪ್ರಣವ್‌ ಮುಖರ್ಜಿ ಘೋಷಿಸಿದರು.

ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಮರಳಿ ಜಮ್ಮು ಮತ್ತು ಕಾಶ್ಮೀರಕ್ಕೆ   ಕಳಿಸಲು  ವಿಶೇಷ ಪ್ರಯತ್ನ  ಮಾಡಲಾಗುವುದು.   ಅವರು ಕಾಶ್ಮೀರಲ್ಲಿ ನಿರ್ಭೀತಿಯಿಂದ ಜೀವನ ಸಾಗಿಸಲು ಅಗತ್ಯ ವಾತಾವರಣ  ನಿರ್ಮಿಸಲಾಗುವುದು ಎಂದು ಆಶ್ವಾಸನೆ ನೀಡಿದರು. 1990ರಲ್ಲಿ 24,202 ಕಾಶ್ಮೀರಿ ಪಂಡಿತರ ಕುಟುಂಬಗಳು ಕಣಿವೆ ರಾಜ್ಯವನ್ನು ತೊರೆದಿವೆ.

ನುಡಿಗಟ್ಟು, ಪ್ರಾಸಬದ್ಧ ಮಾತು
ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸುಮಾರು 55 ನಿಮಿಷಗಳ ಕಾಲ  ಮಾಡಿದ ಭಾಷಣದಲ್ಲಿ ಅಲ್ಲಲ್ಲಿ ನುಡಿ­ಗಟ್ಟು ಹಾಗೂ ಪ್ರಾಸ ಬಳಸಿ ಗಮನ ಸೆಳೆದರು.

‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ (ಒಂದೇ ಭಾರತ, ಶ್ರೇಷ್ಠ ಭಾರತ), ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌  (ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ), ‘ಹರ್‌್\ಹಾತ್‌ ಕೊ ಹುನಾರ್‌, ಹರ್‌್ ಖೇತ್‌್ ಕೊ ಪಾನಿ ( ಪ್ರತಿ ಕೈಗೂ ಕೆಲಸ, ಎಲ್ಲ ಜಮೀನಿಗೂ ನೀರು), ‘ಬೇಟಿ ಬಚಾವೊ, ಬೇಟಿ ಪಢಾವೊ ( ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಕೆ ಶಿಕ್ಷಣ ಕೊಡಿ)...ಇತ್ಯಾದಿ ಘೋಷಣೆ­ಗಳು ಪ್ರಣವ್‌್ ಭಾಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು.
  ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಬಳಸಿಕೊಂಡಿದ್ದ ಕೆಲವೊಂದು ಘೋಷಣೆ­ಗಳೂ ಇಲ್ಲಿವೆ ಎನ್ನುವುದು ಬೇರೆ ಮಾತು.

ಟ್ರೆಡಿಷನ್‌, ಟ್ಯಾಲೆಂಟ್‌, ಟೂರಿಸಂ, ಟ್ರೇಡ್‌್, ಟೆಕ್ನಾಲಜಿ. ಡೆಮಾಕ್ರಸಿ, ಡೆಮಾಗ್ರಫಿ, ಡಿಮಾಂಡ್‌್...ಇತ್ಯಾದಿ ಪ್ರಾಸಬದ್ಧ   ಶಬ್ದಗಳು ಕೂಡ ಭಾಷಣದಲ್ಲಿ ಭರ್ಜರಿಯಾಗಿದ್ದವು.

ರಾಹುಲ್‌ ಕೈಕುಲುಕಿದ ಮೋದಿ...
ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ನರೇಂದ್ರ ಮೋದಿ ಅವರು ರಾಹುಲ್‌್ ಗಾಂಧಿ ಅವರನ್ನು ಕೈಕುಲುಕಿ ಮಾತನಾ­ಡಿಸಿದ್ದು ಎಲ್ಲರ ಗಮನ ಸೆಳೆಯಿತು.

ಇನ್ನೊಂದೆಡೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿ ಹಿರಿಯ ನಾಯಕ ಎಲ್‌್.ಕೆ.ಅಡ್ವಾಣಿ ಅವರ ಜತೆ ಆಗಾಗ ಹರಟೆ ಹೊಡೆಯು­ತ್ತಿದ್ದ ದೃಶ್ಯ ಕೂಡ ಕಂಡುಬಂತು.  ‘ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸರ್ಕಾರ  ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ರಾಷ್ಟ್ರಪತಿ ಹೇಳಿದಾಗ ಸೋನಿಯಾ ಅವರು ಮೇಜು ಕುಟ್ಟಿ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.