ADVERTISEMENT

ಬರ ಅಧ್ಯಯನಕ್ಕೆ ಕೇಂದ್ರ ತಂಡ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ನವದೆಹಲಿ: ಬರಗಾಲ ಪರಿಸ್ಥಿತಿ ಅಧ್ಯಯನಕ್ಕೆ ನವೆಂಬರ್‌ 7 ಮತ್ತು 8 ರಂದು ತಜ್ಞರ ತಂಡ ರಾಜ್ಯಕ್ಕೆ ಭೇಟಿ ಕೊಡಲಿದೆ. ಕೃಷಿ ಸಚಿವ ರಾಧ ಮೋಹನ್‌ಸಿಂಗ್‌ ಗುರುವಾರ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಅವರಿಗೆ ನವೆಂಬರ್‌ 7 ಮತ್ತು 8ರಂದು ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸುವುದಾಗಿ ತಿಳಿಸಿದ್ದಾರೆ.

ರಾಜ್ಯದ 8 ಜಿಲ್ಲೆಗಳ 34 ತಾಲ್ಲೂಕು­ಗಳಲ್ಲಿ ಕಾಣಿಸಿ­ಕೊಂ­ಡಿ­ರುವ ಬರಗಾಲ ಪರಿಸ್ಥಿತಿ ಕುರಿತು ಶ್ರೀನಿವಾಸ ಪ್ರಸಾದ್‌ ಅವರು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು. ಬರಗಾಲ­ದಿಂದ ₨ 3,589 ಕೋಟಿ ಮೌಲ್ಯದ ಕೃಷಿ ಮತ್ತು ತೋಟ­ಗಾರಿಕೆ ಬೆಳೆ ನಷ್ಟವಾಗಿದ್ದು, ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಿಂದ  ₨ 779.20 ಕೋಟಿ ನೆರವು ನೀಡು­ವಂತೆ ಕೇಳಿದ್ದಾರೆ. 18.23 ಲಕ್ಷ ಹೆಕ್ಟೇರ್‌ ಕೃಷಿ, ಎರಡು ಲಕ್ಷ ಹೆಕ್ಟೇರ್‌ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸುರಿದ ಸತತ ಮಳೆಯಿಂದ ಉಂಟಾದ ಪ್ರವಾಹದಿಂದಲೂ ಬೆಳೆ ಹಾನಿ­ಯಾಗಿದ್ದು, ಕೇಂದ್ರದಿಂದ ₨ 266 ಕೋಟಿ ನೆರವು ಕೇಳಲಾಗಿದೆ. ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದೆ. ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಲಾಗಿದೆ ಎಂದು ಅವರು ಹೇಳಿದರು.

ಮಳೆಯಾಶ್ರಿತ ಪ್ರದೇಶದಲ್ಲಿ ಹೆಕ್ಟೇರ್‌ಗೆ ₨ 15 ಸಾವಿರ, ನೀರಾವರಿ ಪ್ರದೇಶದಲ್ಲಿ ಹೆಕ್ಟೇರ್‌ಗೆ ₨ 25 ಸಾವಿರ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್‌ಗೆ ₨ 40 ಸಾವಿರ ಪರಿಹಾರ ಕೊಡಲಾಗಿದೆ. ಬೇರಾವ ರಾಜ್ಯಗಳು ರೈತರಿಗೆ ಇಷ್ಟೊಂದು ಪರಿಹಾರ ನೀಡುತ್ತಿಲ್ಲ. ರಾಜ್ಯ ಇದುವರೆಗೆ ₨ 962 ಕೋಟಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ₨ 542 ಕೋಟಿ ಬಿಡುಗಡೆ ಮಾಡಿದೆ ಎಂದು ಶ್ರೀನಿವಾಸ ಪ್ರಸಾದ್‌ ಮಾಹಿತಿ ನೀಡಿದರು.

ರಾಜ್ಯ 2011ರಿಂದ ಸತತ ಬರಗಾಲ ಪರಿಸ್ಥಿತಿ ಎದುರಿಸುತ್ತಿದೆ. 2011ರಲ್ಲಿ 123 ತಾಲ್ಲೂಕುಗಳು, 2012ರಲ್ಲಿ 156 ತಾಲ್ಲೂಕುಗಳು, 2013ರಲ್ಲಿ 125 ತಾಲ್ಲೂಕು ಬರಗಾಲ ಪೀಡಿತವಾಗಿದ್ದವು. ಈ ವರ್ಷ ದಕ್ಷಿಣ ಒಳನಾಡಿನಲ್ಲಿ ಬರಗಾಲ ಮತ್ತು ಉತ್ತರ ಒಳನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಕಾಡಿದೆ. ಕೇಂದ್ರದಿಂದ ಒಟ್ಟಾರೆ ₨ 2,058 ಕೋಟಿ ಬರಬೇಕಾಗಿದೆ. ಇದುವರೆಗೆ ಬಂದಿರುವುದು ಕೇವಲ ₨ 542 ಕೋಟಿ ಮಾತ್ರ. ಈ ಹಣ ಬಳಕೆ ಮಾಡಿದ ಪ್ರಮಾಣ ಪತ್ರ ಕಳುಹಿಸಿದರೆ ಉಳಿದ ಹಣ ಬಿಡುಗಡೆ ಆಗಲಿದೆ ಎಂದು ಸಚಿವರು ನುಡಿದರು.

ADVERTISEMENT

ಅತಿವೃಷ್ಟಿ ಮತ್ತು ಅನಾವೃಷ್ಟಿ ಹಾನಿಗೆ ಕೇಂದ್ರದ ನೆರವು ಕೇಳುವ ವಿಷಯದಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್‌ 21 ರಂದೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಅಧ್ಯಯನ ತಂಡದ ಭೇಟಿ ವಿಳಂಬದಿಂದ ಸಮಸ್ಯೆ ಆಗುವುದಿಲ್ಲ. ರಾಜ್ಯ ಸರ್ಕಾರ ಪೂರ್ಣ ಮಾಹಿತಿ­ಯನ್ನು ತಂಡಕ್ಕೆ ನೀಡಲಿದೆ. ವಿಡಿಯೊ ದಾಖಲೆಗಳನ್ನು ಒದಗಿಸಲಿದೆ ಎಂದು ಶ್ರೀನಿವಾಸ ಪ್ರಸಾದ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.