ADVERTISEMENT

ಬಾಲಿವುಡ್ ‘ಬಿಗ್‌ ಬಿ’ಗೆ ತಳಮಳ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್   

ಮುಂಬೈ: ಹಿರಿಯ ನಟಿ ಶ್ರೀದೇವಿಯರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.

ಶ್ರೀದೇವಿ ಸಾವಿಗೆ ಕೆಲವೇ ಕ್ಷಣಗಳ ಮುನ್ನ ಶನಿವಾರ ತಡರಾತ್ರಿ ಸುಮಾರು 1.15ರ ವೇಳೆಗೆ ಅಮಿತಾಭ್ ಬಚ್ಚನ್‌ ಅವರು ‘ಯಾಕೋ ಗೊತ್ತಿಲ್ಲ ವಿಚಿತ್ರ ಭೀತಿ, ತಳಮಳವಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದರು.

ಇದಾದ ಕೆಲವೇ ಕ್ಷಣಗಳಲ್ಲಿ ಶ್ರೀದೇವಿ ಅವರ ಸಾವಿನ ಸುದ್ದಿ ಬಹಿರಂಗವಾಗಿದೆ. ಆ ಟ್ವೀಟ್ ಈಗ ವೈರಲ್ ಆಗಿದೆ.

ADVERTISEMENT

ಅಮಿತಾಭ್ ಅವರ ಈ ಟ್ವೀಟ್‌ ಅನ್ನು 8 ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ. ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ದೇವರಿಗೆ ಶಾಪ: ನಿರ್ದೇಶಕ, ನಿರ್ಮಾಪಕ ರಾಮ್‌ ಗೋಪಾಲ್‌ ವರ್ಮಾ ಅವರು ಶ್ರೀದೇವಿ ಸಾವಿಗಾಗಿ ದೇವರಿಗೆ ಶಾಪ ಹಾಕಿದ್ದಾರೆ.

‘ದೇವರು ತುಂಬಾ ನಿಷ್ಕರುಣಿ ಮತ್ತು ಗರ್ವಿ. ಶ್ರೀದೇವಿ ಮತ್ತು ಬ್ರೂಸಲಿ ಅವರ ಸಾವಿನ ವಿಷಯದಲ್ಲಿ ದೇವರು ಇದನ್ನು ಸಾಬೀತು ಪಡಿಸಿದ್ದಾನೆ. ಸಾಧ್ಯವಾದರೆ ಬ್ರೂಸಲಿಯು ದೇವರಿಗೆ ಎರಡು ಒದೆ ನೀಡಲಿ. ಒಂದು ತನ್ನ ಸಾವಿಗೆ, ಮತ್ತೊಂದು ಶ್ರೀದೇವಿ ಅವರ ಸಾವಿಗೆ’ ಎಂದು ವರ್ಮಾ ತುಂಬಾ ಆಕ್ರೋಶ ಭರಿತರಾಗಿ ಸರಣಿ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತಾಭ್‌ ಬಚ್ಚನ್‌, ರಜನಿಕಾಂತ್‌, ಕಮಲ್‌ ಹಾಸನ್‌, ಕ್ರಿಕೆಟ್‌ ತಾರೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

‘ನಟಿ ಶ್ರೀದೇವಿ ಅವರ ಅಕಾಲಿಕ ಸಾವು ದುಃಖ ತಂದಿದೆ. ಸುದೀರ್ಘ ವೃತ್ತಿಜೀವನದಲ್ಲಿ ವೈವಿಧ್ಯಮಯ ಮತ್ತು ಸ್ಮರಣೀಯ ಪಾತ್ರಗಳಲ್ಲಿ ಅವರ ಅಭಿ
ನಯ ಇಂದಿಗೂ ನೆನಪಿನಲ್ಲಿ ಉಳಿದಿವೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

‘ನಾನು ಅವರ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇನೆ. ಅವರು ನಮ್ಮೊಂದಿಗಿಲ್ಲ ಎಂಬುದನ್ನು ಸಹಿಸಿಕೊಳ್ಳುವುದು ಕಷ್ಟ’ ಎಂದು ತೆಂಡೂಲ್ಕರ್‌ ಹೇಳಿದ್ದಾರೆ.

‘ಶ್ರೀದೇವಿ ಅಕಾಲಿಕ ಮರಣದ ಸುದ್ದಿ ಆಘಾತ ತಂದಿದೆ. ಕಲೆಗೆ ಸಮರ್ಪಿಸಿಕೊಂಡು ಅವರು ಲಕ್ಷಾಂತರ ಜನರಿಗೆ ನಗುವನ್ನು ನೀಡಿದ ಬಹುಮುಖ ನಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.