ADVERTISEMENT

ಬಿಕ್ಕಟ್ಟಿನತ್ತ ಪಳನಿಸ್ವಾಮಿ ಸರ್ಕಾರ

ತಮಿಳುನಾಡು: ರಾಜ್ಯಪಾಲರಿಗೆ ದಿನಕರನ್ ಬಣದ 19 ಶಾಸಕರ ಪತ್ರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಬಿಕ್ಕಟ್ಟಿನತ್ತ ಪಳನಿಸ್ವಾಮಿ ಸರ್ಕಾರ
ಬಿಕ್ಕಟ್ಟಿನತ್ತ ಪಳನಿಸ್ವಾಮಿ ಸರ್ಕಾರ   

ಚೆನ್ನೈ: ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ತಮಿಳುನಾಡಿನಲ್ಲಿ ಮಂಗಳವಾರ ಎಐಎಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಬಣದ 19 ಶಾಸಕರು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರಿಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ರಾಜ್ಯಪಾಲ ಸಿ.ಎಚ್.ವಿದ್ಯಸಾಗರ್‌ ರಾವ್‌ ಅವರಿಗೆ ವೈಯಕ್ತಿಕ ಪತ್ರಗಳನ್ನು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ತಂಗ ತಮಿಳ್ ಸೆಲ್ವಂ ‘ಫೆಬ್ರುವರಿ 18ರಂದು ನಡೆದಿದ್ದ ವಿಶ್ವಾಸಮತ ಯಾಚನೆಯಲ್ಲಿ ನಾವು ಪಳನಿಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆವು. ಆದರೆ ಒ.ಪನ್ನೀರ್‌ಸೆಲ್ವಂ ಮತ್ತು ಅವರ ಬಣದ ಶಾಸಕರು ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸಿದ್ದರು. ಆದರೆ ಪಳನಿಸ್ವಾಮಿ ಈಗ ಪನ್ನೀರ್‌ಸೆಲ್ವಂ ಜತೆ ಕೈಜೋಡಿಸಿದ್ದಾರೆ. ಈ ಮೂಲಕ ನಮ್ಮ ವಿಶ್ವಾಸ ಕಳೆದುಕೊಂಡಿರುವ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಿ’ ಎಂದು ಒತ್ತಾಯಿಸಿದ್ದಾರೆ.

ಜತೆಗೆ ಎಐಎಡಿಎಂಕೆ ಮಿತ್ರಪಕ್ಷ ಪಿಎಂಕೆಯ ಮೂವರು ಶಾಸಕರೂ ಬೆಂಬಲ ವಾಪಸ್ ಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದಾರೆ. ಇದರಿಂದ ಸರ್ಕಾರ ಬಹುಮತದ ಕೊರತೆ ಎದುರಿಸುವಂತಾಗಿದೆ. 234 ಸ್ಥಾನಗಳ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ ಮತ್ತು ಪಿಎಂಕೆ ಒಟ್ಟು 134 ಶಾಸಕರನ್ನು ಹೊಂದಿವೆ. ಈಗ 22 ಮಂದಿ ಬೆಂಬಲ ವಾಪಸ್‌ ಪಡೆದಿರುವುದರಿಂದ ಪಳನಿಸ್ವಾಮಿಯ ಬೆಂಬಲಿಗರ ಸಂಖ್ಯೆ 112ಕ್ಕೆ ಕುಸಿದಿದೆ. ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯ.

ADVERTISEMENT

‘22 ಶಾಸಕರು ಬೆಂಬಲ ವಾಪಸ್‌ ಪಡೆದಿರುವುದರಿಂದ ಪಳನಿಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಾಗಿ ವಿಶ್ವಾಸಮತ ಯಾಚಿಸುವಂತೆ ಪಳನಿಸ್ವಾಮಿಗೆ ಸೂಚಿಸಿ’ ಎಂದು ವಿರೋಧ ಪಕ್ಷ ಡಿಎಂಕೆ ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದೆ.

ಇದರ ಮಧ್ಯೆಯೇ ‘ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದ್ದ ‍ಪಕ್ಷದ ರಾಜ್ಯಸಭಾ ಸದಸ್ಯ ಆರ್.ವೈದ್ಯಲಿಂಗಂ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಾರಣ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ’ ಎಂದು ದಿನಕರನ್ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.