ADVERTISEMENT

ಬಿಜೆಪಿಯಿಂದ ಸಮಾಜ ವಿಭಜನೆ: ರಾಹುಲ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಸಿರ್ಸಾ, ಹರಿಯಾಣ (ಪಿಟಿಐ): ಭ್ರಷ್ಟಾಚಾರದ ಬಗ್ಗೆ ದ್ವಿಮುಖ ನೀತಿ ಅನುಸರಿಸುತ್ತಿರುವ ಬಿಜೆಪಿ, ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್‌ ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಳಂಕಿತ ಬಿ. ಎಸ್‌. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿ ಮುಖಂಡರು ತಮ್ಮ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿಯ ಭ್ರಷ್ಟಾಚಾರವನ್ನು ಪ್ರಸ್ತಾಪಿಸದೆ ಇತರ ಪಕ್ಷಗಳು ಆಡಳಿತದಲ್ಲಿ ಇರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ದ್ವಿಮುಖ ಧೋರಣೆ ಅನುಸರಿಸುತ್ತಿ­ದ್ದಾರೆ’ ಎಂದು ಹರಿಹಾಯ್ದರು.

‘ಭ್ರಷ್ಟಾಚಾರ ಆಪಾದನೆಗೆ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಈ ಬಿಜೆಪಿ ಮುಖಂಡರು ಕರ್ನಾಟಕಕ್ಕೆ ಹೋಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ’ ಎಂದು ಸವಾಲು ಹಾಕಿದರು.

ಗಣಿ ಮಾಫಿಯಾ ದರ್ಬಾರು ನಡೆಸುತ್ತಿರುವ ಛತ್ತೀಸಗಢಕ್ಕೆ ಹೋಗಲು ಈ ಬಿಜೆಪಿ ಮುಖಂಡರಿಗೆ ಧೈರ್ಯವಿದೆಯೇ ಎಂದು ರಾಹುಲ್‌ ಪ್ರಶ್ನಿಸಿದರು.

ಹಿಂದಿನ ಚುನಾವಣೆಯಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎಂದು ಮತ ಯಾಚಿಸಿದ ಬಿಜೆಪಿ ಈ ಬಾರಿ ‘ಗುಜರಾತ್ ಮಾದರಿಯ ಅಭಿವೃದ್ಧಿ’ ಎಂದು ಮತ ಯಾಚಿಸುತ್ತಿದೆ. ಈ ಸರಣಿ ಬಾಲಿವುಡ್‌ನ ‘ಧೂಮ್‌’ ಚಿತ್ರದಂತೆ ಮುಂದುವರಿಯುವ ಲಕ್ಷಣ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯನ್ನು ಕಟುವಾಗಿ ಟೀಕಿಸಿದ ನಂತರ ರಾಹುಲ್‌ ಅವರು ಯುಪಿಎ ಸರ್ಕಾರದ ಸಾದನೆಯ ಪಟ್ಟಿಯನ್ನು ಜನರ ಮುಂದಿಟ್ಟು ಕಾಂಗ್ರೆಸ್ಗೆ ಮಾತ ಹಾಕುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.