ADVERTISEMENT

ಬುಖಾರಿ ಉತ್ತರಾಧಿಕಾರಿ ನೇಮಕ ಕಾನೂನುಬಾಹಿರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಜಾಮಾ ಮಸೀದಿಯ ಶಾಹಿ ಇಮಾಮ್‌ ಸಯ್ಯದ್‌ ಅಹ್ಮದ್‌ ಬುಖಾರಿ ಅವರು ತಮ್ಮ ಮಗನನ್ನು ಉತ್ತರಾಧಿ­ಕಾರಿ­ಯಾಗಿ ನೇಮಕ ಮಾಡುವುದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಆದರೆ ಶನಿವಾರ ನಡೆಸಲು ಉದ್ದೇಶಿಸ­ಲಾಗಿ­ರುವ ಉತ್ತರಾಧಿಕಾರಿ  ನೇಮಕ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಉತ್ತರಾಧಿಕಾರಿ ನೇಮಕ ಸಮಾ­ರಂಭಕ್ಕೆ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಮೌಲ್ಯ ಇಲ್ಲ. ಆದರೆ ಸಮಾ­ರಂಭಕ್ಕೆ ತಡೆಯನ್ನೂ ನೀಡುವು­ದಿಲ್ಲ. ಇದು ಇಮಾಮ್‌ ಅವರ ಪರ­ವಾಗಿ ನೀಡುತ್ತಿರುವ ತೀರ್ಪು ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯ­­ಮೂರ್ತಿ ಆರ್‌.ಎಸ್‌. ಎಂಡ್ಲಾ ಅವರಿದ್ದ ಪೀಠ ಹೇಳಿತು.

ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸುವು­ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ, ವಕ್ಫ್‌ ಮಂಡಳಿ ಮತ್ತು ಬುಖಾರಿ ಅವರ ಪ್ರತಿಕ್ರಿಯೆ­ಯನ್ನು ಕೋರ್ಟ್‌ ಕೇಳಿತ್ತು.
ಬುಖಾರಿ ಅವರು ತಮ್ಮ ಮಗನನ್ನು ಉತ್ತರಾಧಿ­ಕಾರಿಯಾಗಿ ನೇಮಿಸುವುದಕ್ಕೆ ಕಾನೂನಿನಲ್ಲಿ ಯಾವುದೇ ಮೌಲ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ವಕ್ಫ್‌ ಮಂಡಳಿ ಹೇಳಿತ್ತು.

ವಕ್ಫ್‌ ಮಂಡಳಿಯ ಆಸ್ತಿಯಾಗಿರುವ ಜಾಮಾ ಮಸೀದಿಯ ಉಸ್ತುವಾರಿಯಲ್ಲಿ ಮಂಡಳಿ ಯಾವುದೇ ಅಧಿಕಾರ ಚಲಾಯಿಸದಿರಲು ಕಾರಣವೇನು ಎಂಬ ಪ್ರಶ್ನೆಗೆ ಮಂಡಳಿ ಉತ್ತರಿಸಿಲ್ಲ. ಹಾಗೆಯೇ ಜಾಮಾ ಮಸೀದಿಯ ಎಲ್ಲ ವರಮಾನವನ್ನೂ ಬುಖಾರಿ ಅವರೇ ಅನುಭವಿ­ಸುತ್ತಿದ್ದಾರೆ. ನ್ಯಾಯಾಲಯದ ನಿರ್ದೇಶನ­ವಿದ್ದರೂ ಲೆಕ್ಕಪತ್ರ ಪರಿಶೀಲನೆಯ ಕೆಲಸವನ್ನೂ ವಕ್ಫ್‌ ಮಂಡಳಿ ಮಾಡಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಸುಹೈಲ್‌ ಅಹ್ಮದ್‌ ಖಾನ್‌, ಅಜಯ್‌ ಗೌತಮ್‌ ಮತ್ತು ವಿ.ಕೆ. ಆನಂದ್‌ ಎಂಬವರು ಬುಖಾರಿ ಅವರು ತಮ್ಮ ಮಗ­ನನ್ನು ಉತ್ತರಾಧಿಕಾರಿಯಾಗಿ  ನೇಮಿಸಲು ಹೊರಟಿ­ರುವು­ದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.