ADVERTISEMENT

ಬೋಡೊ ದಾಳಿ: ಸಾವಿನ ಸಂಖ್ಯೆ 78ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 8:33 IST
Last Updated 25 ಡಿಸೆಂಬರ್ 2014, 8:33 IST

ಗುವಾಹಟಿ/ಸೋನಿತ್‌ಪುರ (ಪಿಟಿಐ): ಅಸ್ಸಾಂನಲ್ಲಿ ಬುಡಕಟ್ಟು ಜನರ ನೆಲೆಗಳ ಮೇಲೆ ದಾಳಿ ನಡೆಸಿದ ಬೋಡೊಲ್ಯಾಂಡ್‌ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ ಸಾಂಗ್‌ಬಿಜಿತ್‌ ಬಣಕ್ಕೆ (ಎನ್‌ಡಿಎಫ್‌ಬಿಎಸ್‌) ಸೇರಿದ ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಮಂಗಳವಾರ ನಡೆದ ಭೀಕರ ದಾಳಿಗೆ ನಲುಗಿರುವ ಸೋನಿತ್‌ಪುರ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಮತ್ತೆ ಆರು ಮೃತದೇಹಗಳು ಪತ್ತೆಯಾಗಿದ್ದು, ಘಟನೆಯಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.

ಸೋನಿತ್‌ಪುರದ ವಿಶ್ವನಾಥ್ ಚರೈಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿ ಮಾತನಾಡಿದ ಸಚಿವ ರಾಜನಾಥ್ ಅವರು, ‘ಎನ್‌ಡಿಎಫ್‌ಬಿಎಸ್‌ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಹಾಗೂ ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು   ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯ ಬಗೆಗಿನ ಪ್ರಶ್ನೆಗೆ ಅವರು, ‘ಎನ್‌ಡಿಎಫ್‌ಬಿಎಸ್‌ ನಡೆಸಿರುವುದು ಸಾಮಾನ್ಯ ದಾಳಿಯಲ್ಲ. ಅದೊಂದು ವ್ಯವಸ್ಥಿತ ಭಯೋತ್ಪಾದನೆ. ಅದಕ್ಕೆ ನಾವು ಸೂಕ್ತ ಪ್ರತ್ಯುತ್ತರ ನೀಡುತ್ತೇವೆ’ ಎಂದರು.

‘ಭಯೋತ್ಪಾದನೆಯ ಎಲ್ಲಾ ಬಗೆಯ ಚಟುವಟಿಕೆಗಳ ವಿರುದ್ಧ ಕೇಂದ್ರ ಸರ್ಕಾರವು ಶೂನ್ಯ ಸಂಹಿಷ್ಣುತಾ ನೀತಿ ಅನುಸರಿಸುತ್ತಿದೆ. ಈ ಘಟನೆಯಲ್ಲೂ ಅಂಥದ್ದೆ ನಿಲುವು ಇರಲಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.