ADVERTISEMENT

ಭಾರತದ ಇತಿಹಾಸದಲ್ಲಿ ಮೊದಲು

ಶಾಂತನಾಗಿದ್ದ, ಹಿಂದಿಯಲ್ಲಿ ಉತ್ತರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
ಭಾರತದ ಇತಿಹಾಸದಲ್ಲಿ ಮೊದಲು
ಭಾರತದ ಇತಿಹಾಸದಲ್ಲಿ ಮೊದಲು   

ಮುಂಬೈ: ಭಾರತದಲ್ಲಿ ನಡೆದ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬ ವಿದೇಶದಿಂದ ಭಾರತದ ನ್ಯಾಯಾಲಯದ ವಿಚಾರಣೆ ಎದುರಿಸಿದ್ದು ಇದೇ ಮೊದಲು.

ಹೆಡ್ಲಿ ಅಮೆರಿಕದ ಅಜ್ಞಾತ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ಎದುರಿಸಿದ್ದಾನೆ. ಅಮೆರಿಕದ ವಕೀಲೆ ಸಾರಾ ಸ್ಟ್ರೈಕರ್‌, ಹೆಡ್ಲಿಯ ವಕೀಲ ಜಾನ್‌ ಥೀಸ್‌ ಮತ್ತು ಜಾನ್‌ ಜತೆ ಕೆಲಸ ಮಾಡುವ ಬಾಬ್‌ ಸೆಡಾರ್‌ ಅವರು ಹೆಡ್ಲಿ ಜತೆಗಿದ್ದರು.

ಮುಂಬೈ ಪೊಲೀಸ್‌ನ ಅಪರಾಧ ವಿಭಾಗದ ಮುಖ್ಯಸ್ಥರಾಗಿರುವ ಎಡಿಜಿಪಿ ಅತುಲ್‌ ಕುಲಕರ್ಣಿ ಹಾಗೂ ಇತರ ಕೆಲ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.

ರಾಷ್ಟ್ರೀಯ ತನಿಖಾ ದಳ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳೂ ಇದ್ದರು. ಅಮೆರಿಕದ ಎಫ್‌ಬಿಐ ಮತ್ತು ಅಮೆರಿಕ ರಾಯಭಾರಿ ಕಚೇರಿಯ ತಲಾ ಒಬ್ಬ ಅಧಿಕಾರಿ ನ್ಯಾಯಾಲಯಕ್ಕೆ ಬಂದಿದ್ದರು.

ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಹಾಜರಿದ್ದರು. ‘ನಾನು ಹೆಡ್ಲಿ ಅವರನ್ನು ಪ್ರತಿನಿಧಿಸುತ್ತಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ ಅವರು, ‘ಹೆಡ್ಲಿ ಅವರ ವಕೀಲರ ಕೋರಿಕೆಯಂತೆ ನ್ಯಾಯಾಲಯಕ್ಕೆ ಬಂದಿದ್ದೇನೆ’ ಎಂದಿದ್ದಾರೆ.

ಅಬೂ ಜುಂದಾಲ್‌ ವಿಚಾರಣೆ:  ಪ್ರಕರಣದ ಇನ್ನೊಬ್ಬ ಆರೋಪಿ ಜಬೀವುದ್ದೀನ್‌ ಅನ್ಸಾರಿ ಅಲಿಯಾಸ್‌ ಅಬೂ ಜುಂದಾಲ್‌ ಕೂಡಾ ಸೋಮವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ಎದುರಿಸಿದ.

ಆರ್ಥರ್‌ ರೋಡ್‌ ಜೈಲಿನಲ್ಲಿರುವ ಜುಂದಾಲ್‌ನನ್ನು ಭದ್ರತೆಯ ಕಾರಣದಿಂದ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲಿಲ್ಲ.

ಶಾಂತನಾಗಿದ್ದ, ಹಿಂದಿಯಲ್ಲಿ ಉತ್ತರ
ಐದೂವರೆ ಗಂಟೆಗಳಲ್ಲಿ 200ಕ್ಕೂ ಅಧಿಕ ಪ್ರಶ್ನೆಗಳನ್ನು ಎದುರಿಸಿದ ಡೇವಿಡ್‌ ಹೆಡ್ಲಿ ಒಮ್ಮೆಯೂ ಒತ್ತಡಕ್ಕೆ ಒಳಗಾದಂತೆ ಕಂಡುಬರಲಿಲ್ಲ. ಶಾಂತವಾಗಿದ್ದುಕೊಂಡೇ ಉತ್ತರಿಸಿದ್ದಾನೆ.

ಪ್ಯಾಂಟ್‌ ಮತ್ತು ತುಂಬು ತೋಳಿನ ಟಿ–ಶರ್ಟ್‌ ತೊಟ್ಟು ವಿಡಿಯೊ ಕಾನ್ಫರೆನ್ಸ್‌ಗೆ ಬಂದಿದ್ದ ಹೆಡ್ಲಿ ವಿರಾಮದ ವೇಳೆ ಕಾಫಿ ಹೀರುತ್ತಿದ್ದುದು ಕಂಡುಬಂತು.
ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ವಿಚಾರಣೆ ಆರಂಭವಾಯಿತು. ಈ ವೇಳೆ ಅಮೆರಿಕದಲ್ಲಿ ರಾತ್ರಿ 8.30 ಆಗಿತ್ತು. ವಿಚಾರಣೆ ಕೊನೆಗೊಳ್ಳುವಾಗ ಅಲ್ಲಿ  ಮಧ್ಯರಾತ್ರಿ 2 ಗಂಟೆ ಆಗಿತ್ತು.

ADVERTISEMENT

ಹೆಡ್ಲಿಗೆ ಇಂಗ್ಲಿಷ್‌ ಅಲ್ಲದೆ, ಉರ್ದು ಮತ್ತು ಹಿಂದಿ ಭಾಷೆ ಬರುತ್ತಿದ್ದ ಕಾರಣ ವಿಚಾರಣೆ ಸುಗಮವಾಗಿ ನಡೆಯಿತು.

ಶಿಕ್ಷಣ ಪಡೆದದ್ದು ಎಲ್ಲಿ ಎಂದು ಕೇಳಿದಾಗ, ‘ಹಸನ್‌ ಅಬ್ದಲ್‌ ಕೆಡೆಟ್‌ ಕಾಲೇಜು’ ಎಂದು ಉತ್ತರಿಸಿದ್ದಾನೆ. ನ್ಯಾಯಾಲದಲ್ಲಿದ್ದವರಿಗೆ ಅದು ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಆಗ ಹೆಡ್ಲಿ, ‘ಕೆಡೆಟ್‌ ಕಾಲೇಜ್‌... ಶಹರ್‌ ಕಾ ನಾಮ್‌ ಹಸನ್‌ ಅಬ್ದಲ್‌ ಹೈ’   (ಪಟ್ಟಣದ ಹೆಸರು ಹಸನ್‌ ಅಬ್ದಲ್‌) ಎಂದು ಹಿಂದಿಯಲ್ಲಿ ಹೇಳಿದ್ದಾನೆ. ಹಸನ್‌ ಅಬ್ದಲ್‌ ಪಟ್ಟಣ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಅಟೋಕ್‌ ಜಿಲ್ಲೆಯಲ್ಲಿದೆ.

ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಿದ್ದೇವೆ ಎಂದು ನ್ಯಾಯಾಧೀಶರು ಹೇಳಿದಾಗ, ಹೆಡ್ಲಿ ತನ್ನ ಕೈಗಳನ್ನು ಜೋಡಿಸಿ (ನಮಸ್ತೆ ಎನ್ನುವ ರೀತಿ) ನಗು ಬೀರುತ್ತಾ, ‘ಶುಭ ದಿನ’ ಎಂದಿದ್ದಾನೆ.

ಹೆಡ್ಲಿ ಕೆಲವೊಮ್ಮೆ ಹಾಸ್ಯವನ್ನೂ ಮೆರೆದ. ಎಲ್‌ಇಟಿ ತರಬೇತಿ ಶಿಬಿರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ಪಡೆದಿದ್ದೀಯಾ ಎಂದು ಕೇಳಿದಾಗ, ‘ಎಕೆ–47 ರೈಫಲ್‌ ಅನ್ನು ಅತ್ಯಾಧುನಿಕ ಶಸ್ತ್ರಾಸ್ತ್ರವೆಂದು ಪರಿಗಣಿಸುವುದಾದರೆ ಹೌದು’ ಎಂದು ಉತ್ತರಿಸಿದ್ದಾನೆ.

‘ಸೇನೆ ವಿರುದ್ಧ ಹೋರಾಡಲು ಬಯಸಿದ್ದ’
​‘ಡೇವಿಡ್‌ ಹೆಡ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಸಕ್ರಿಯವಾಗಿ ಹೋರಾಡಲು ಬಯಸಿದ್ದ. ಆದರೆ ಎಲ್‌ಇಟಿ ಕಮಾಂಡರ್‌ ಝಕಿವುರ್‌ ರೆಹಮಾನ್‌ ಲಖ್ವಿ ಆತನನ್ನು ತಡೆದು ಬೇರೆ ಹೊಣೆ ವಹಿಸಿಕೊಟ್ಟಿದ್ದ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಂ ಹೇಳಿದರು.

ಹೆಡ್ಲಿಯ ಹೇಳಿಕೆಗಳ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ವಿವರಣೆ ನೀಡಿದ ಅವರು, ‘ವಿಚಾರಣೆ ವೇಳೆ ಹೆಡ್ಲಿ ಬಹಿರಂಗಪಡಿಸಿದ ವಿವರ ನನಗೆ ತೃಪ್ತಿ ನೀಡಿದೆ. ಹಫೀಜ್‌ ಸಯೀದ್‌ನನ್ನು ಭೇಟಿಯಾಗಿದ್ದನ್ನು ಆತ ಖಚಿತಪಡಿಸಿದ್ದಾನೆ. ಮಂಗಳವಾರ ಇನ್ನಷ್ಟು ಪ್ರಶ್ನೆಗಳನ್ನು ಕೇಳಲಾಗುವುದು. ಆಗ ಮತ್ತಷ್ಟು ಸತ್ಯ ಹೊರಬೀಳಲಿದೆ’ ಎಂದಿದ್ದಾರೆ.

‘ಐಎಸ್‌ಐ ಅಧಿಕಾರಿಗಳನ್ನು ಭೇಟಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ. ಐಎಸ್‌ಐ ಮತ್ತು ಎಲ್‌ಇಟಿ ನಡುವೆ ನಿಕಟ ಸಂಪರ್ಕವಿದೆ ಎಂಬುದು ಸಾಬೀತಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.