ADVERTISEMENT

ಭಿನ್ನ ವಿಚಾರಗಳನ್ನು ಹತ್ತಿಕ್ಕಬಾರದು: ರಘುರಾಮ್‌ ರಾಜನ್‌

ಪಿಟಿಐ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ರಘುರಾಮ್‌ ರಾ‌ಜನ್‌
ರಘುರಾಮ್‌ ರಾ‌ಜನ್‌   

ಮುಂಬೈ: ಚರ್ಚೆಗೆ ಮುಕ್ತವಾಗಿರುವ ಸುರಕ್ಷಿತ ವಾತಾವರಣವನ್ನು ವಿಶ್ವವಿದ್ಯಾಲಯಗಳಲ್ಲಿ ಸೃಷ್ಟಿಸುವುದು ಅಗತ್ಯ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐನ) ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ.

‘ವಿದ್ಯಾ ಕೇಂದ್ರಗಳಾಗಿ, ಹೊಸ ಆಲೋಚನೆಗಳ ಕುರಿತು ಚರ್ಚೆ ನಡೆಸಲು ವಿಶ್ವವಿದ್ಯಾಲಯಗಳು ಅವಕಾಶ ಕಲ್ಪಿಸುತ್ತವೆ. ಆದ್ದರಿಂದ ಭಿನ್ನ ವಿಚಾರಧಾರೆಗಳ ಕತ್ತು ಹಿಸುಕುವ ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ದೇಶದ್ರೋಹಿ ಎಂದು ಹೀಗಳೆಯುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಮುಕ್ತ ಚರ್ಚೆ ಹಾಗೂ ಸಂವಾದ ಸಾಧ್ಯವಾಗುವಂತಹ ವಾತಾವರಣವನ್ನು ನಾವೆಲ್ಲ ಸೃಷ್ಠಿಸಬೇಕು. ಆಗ, ಜನರು ಸ್ವತಂತ್ರವಾಗಿ ಅಭಿಪ್ರಾಯ
ವ್ಯಕ್ತಪಡಿಸುತ್ತಾರೆ. ಇದರಿಂದ ಸಮಾಜವು ಪ್ರಗತಿಯ ದಾರಿಯಲ್ಲಿ ಸಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಭಿನ್ನ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ವಿವಾದಗಳು ಹುಟ್ಟುತ್ತವೆ. ಆದರೆ, ಚರ್ಚೆ ಮುನ್ನೆಲೆಗೆ ಬಂದು ವಿವಾದ ಹಿಂದೆ ಸರಿಯಬೇಕು. ಕೆಲವು ವಿಚಾರಗಳು ಆಗಿನ ಸಂದರ್ಭಕ್ಕೆ ಸೂಕ್ತವಾಗಿ ಕಾಣದಿರಬಹುದು. ಆದರೆ, ಭವಿಷ್ಯದಲ್ಲಿ ಅದನ್ನು ನಾವು ಒಪ್ಪಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.