ADVERTISEMENT

ಮತ್ತೆ ಹೈಕೋರ್ಟ್‌ ಅಂಗಳಕ್ಕೆ

ಕೆಪಿಎಸ್‌ಸಿ ಪಟ್ಟಿ: 1998, 1999 ಮತ್ತು 2004ರ ಆಯ್ಕೆ ವಿವಾದ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ಮತ್ತೆ ಹೈಕೋರ್ಟ್‌ ಅಂಗಳಕ್ಕೆ
ಮತ್ತೆ ಹೈಕೋರ್ಟ್‌ ಅಂಗಳಕ್ಕೆ   

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1998, 1999 ಮತ್ತು 2004ರಲ್ಲಿ ನೇಮಕ ಮಾಡಿದ  ಅಧಿಕಾರಿಗಳ ಪಟ್ಟಿ ಕುರಿತಂತೆ, ವಿಚಾರಣೆ  ಮುಂದುವರಿಸಲು ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಹಸಿರು ನಿಶಾನೆ ತೋರಿಸಿದೆ.
ಹೈಕೋರ್ಟ್ ವಿಚಾರಣೆ ವಿರುದ್ಧ  ನೀಡಲಾಗಿದ್ದ ತಡೆಯಾಜ್ಞೆಯನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ ಅವರ ನೇತೃತ್ವದ ತ್ರಿಸದಸ್ಯ ಪೀಠ  ತೆರವು ಮಾಡಿತು.

ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಕೆಪಿಎಸ್‌ಸಿ 1998ನೇ ಸಾಲಿನ ಆಯ್ಕೆ ಪಟ್ಟಿಯನ್ನು ಪರಿಷ್ಕರಣೆ ಮಾಡಿತ್ತು. ಕೆಲ ಅಭ್ಯರ್ಥಿಗಳು ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ಈ ಅರ್ಜಿ ವಜಾಗೊಂಡಿರುವ ಕಾರಣ ಹೈಕೋರ್ಟ್ ನಲ್ಲಿ ಈಗ ಮತ್ತೆ ವಿಚಾರಣೆ ನಡೆಯಲಿದೆ.

1998, 99 ಮತ್ತು 2004ರ ಆಯ್ಕೆ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಗಳಿದ್ದರೆ ಹೈಕೋರ್ಟ್‌ ಮುಂದೆ ಸಲ್ಲಿಸಬಹುದು ಎಂದು ಪೀಠ ಹೇಳಿದೆ.

‘ನೀವು ಬೇಕಾದರೆ 98, 99 ಹಾಗೂ 2004ರಲ್ಲಿ ನಡೆದಿರುವ ಅಧಿಕಾರಿಗಳ ನೇಮಕಾತಿ ಸರಿಯಾಗಿದೆ ಎಂದು ಹೈಕೋರ್ಟ್‌ ಮುಂದೆ ಹೇಳಬಹುದು’ ಎಂದೂ ನ್ಯಾಯಪೀಠ, ಅರ್ಜಿದಾರರ ವಕೀಲ ಪಿ.ಪಿ. ರಾವ್‌ ಅವರಿಗೆ ತಿಳಿಸಿತು.

‘ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಸಿಐಡಿ ವರದಿಯನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಆಯ್ಕೆ ಪಟ್ಟಿ ಪರಿಷ್ಕರಿಸಲು ಸಾಧ್ಯವಿಲ್ಲ’ ಎಂದು ಎಚ್‌.ಎನ್‌. ಗೋಪಾಲಕೃಷ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಲಾಗಿತ್ತು.

‘ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ ಮುಂದೆ ಹೋಗುವ ಬದಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಸೇವಾ ಕಾನೂನಿಗೆ ವಿರುದ್ಧ’ ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದರು.

ಏನಾಗಿತ್ತು
ಕರ್ನಾಟಕ ಹೈಕೋರ್ಟ್‌ ನವೆಂಬರ್‌ 11ರಂದು ಹೊರಡಿಸಿದ್ದ ಆದೇಶದಲ್ಲಿ, ‘24 ಗಂಟೆಯೊಳಗಾಗಿ 1998ರ ಪ್ರೊಬೇಷನರಿ ಎ ಹಾಗೂ ಬಿ ಗುಂಪಿನ ಅಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಿ, ಹೊಸ ಪಟ್ಟಿ ಪ್ರಕಟಿಸಬೇಕು’ ಎಂದು ಕೆಪಿಎಸ್‌ಸಿಗೆ ಆದೇಶ ನೀಡಿತ್ತು. ಅದರಂತೆ ಕೆಪಿಎಸ್‌ಸಿ ಹೊಸ ಪಟ್ಟಿಯನ್ನು ಪ್ರಕಟಿಸಿತ್ತು.

ಏನಾಗಬಹುದು?
ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ  760 ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಕೆಪಿಎಸ್‌ಸಿ ಸಿದ್ಧಪಡಿಸಿರುವ ಪರಿಷ್ಕರಣಾ ಪಟ್ಟಿಯಿಂದಾಗಿ ಕೆಲವರಿಗೆ ಹಿಂಬಡ್ತಿ ಆಗಲಿದೆ. ಕೆಲವರು ಮೇಲ್ದರ್ಜೆಗೆ ಏರಲಿದ್ದಾರೆ. ಗ್ರೂಪ್‌ ಎ ಅಧಿಕಾರಿಗಳು ಬಿ ಗುಂಪಿಗೆ ಹಿಂಬಡ್ತಿ ಮತ್ತು ಬಿ ಗುಂಪಿನವರು ಎ ಗುಂಪಿಗೆ ಮುಂಬಡ್ತಿ ಪಡೆಯಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.