ADVERTISEMENT

ಮರ್ಡೂರ್‌, ಮಂಜುನಾಥ್‌ಗೆ ಪ್ರಶಸ್ತಿ

33 ಸಾಧಕರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಯುವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2014, 19:30 IST
Last Updated 2 ಜೂನ್ 2014, 19:30 IST

ನವದೆಹಲಿ(ಐಎಎನ್‌ಎಸ್‌): ಧಾರ­ವಾಡದ ಕುಮಾರ್‌ ಮರ್ಡೂರ್‌ ಮತ್ತು ಬಿ.ಸಿ. ಮಂಜುನಾಥ್‌ ಸೇರಿದಂತೆ ದೇಶದ 33 ಮಂದಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2012ನೇ ಸಾಲಿನ ‘ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರ’ ಲಭಿಸಿದೆ.

ಸಂಗೀತ, ನೃತ್ಯ ಹಾಗೂ ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರೀಯ ಸಂಗೀತ ಅಕಾಡೆಮಿ ನೀಡುವ ಪ್ರಶಸ್ತಿಯಲ್ಲಿ ರಾಜ್ಯದ ಇಬ್ಬರು ಸೇರಿರುವುದು ವಿಶೇಷ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಯುವಕರ ಪಾಲ್ಗೊಳ್ಳುವಿಕೆ­ಯನ್ನು ಉತ್ತೇಜನ­ಗೊಳಿಸಲು ಕೇಂದ್ರ ಸಂಗೀತ ಅಕಾಡೆಮಿ ಈ ಪ್ರಶಸ್ತಿಯನ್ನು ಬಿಸ್ಮಿಲ್ಲಾ ಖಾನ್ ಅವರ ಹೆಸರಿನಲ್ಲಿ ನೀಡುತ್ತಿದೆ. ಪ್ರಶಸ್ತಿ ಮೊತ್ತ ₨ 25 ಸಾವಿರ.

ಕುಮಾರ್‌ ಮರ್ಡೂರ್‌ ಅವರು ಖ್ಯಾತ ಗಾಯಕ ಪಂ. ಸೋಮನಾಥ್ ಮರ್ಡೂರ್‌ ಅವರ ಪುತ್ರ. ತಂದೆಯ ಬಳಿಯೇ ಸಂಗೀತ ಕಲಿತ ಕುಮಾರ್‌, ಹೆಚ್ಚಿನ ಶಿಕ್ಷಣವನ್ನು ಪಂ. ಫಿರೋಜ್‌ ದಸ್ತೂರ್‌ ಅವರ ಬಳಿ ಪಡೆದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಸ್ನಾತಕ ಪದವಿ ಪಡೆದಿರುವ ಕುಮಾರ್ ಅವರೀಗ ಕೊಲ್ಕತ್ತಾದ ಐಟಿಸಿ ಸಂಗೀತ ಸಂಶೋಧನಾ ಸಂಸ್ಥೆಯ ಉದ್ಯೋಗಿ.

ಪ್ರಶಸ್ತಿ ಪಡೆದಿರುವ ಇನ್ನೊಬ್ಬ ಸಾಧಕ ಬಿ.ಕೆ. ಮಂಜುನಾಥ್‌. ಅವರು ಹಿರಿಯ ಮೃದಂಗ ವಾದಕ ಬಿ. ಕೆ. ಚಂದ್ರಮೌಳಿ ಅವರ ಪುತ್ರ.

ಇವರಲ್ಲದೇ, ಭುವನೇಶ್‌ ಕೊಂಕಾಳಿ, ಸಾವನಿ ತಲ್ವಾಲ್ಕರ್‌, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಂಜಿನಿ–ಗಾಯತ್ರಿ, ಸಾವಿತ್ರಿ ಗಿರೀಶ್‌, ಎನ್‌. ಗುರುಪ್ರಸಾದ್‌, ಅನಿರುದ್ಧ ಅತ್ರೇಯ ಸೇರಿದಂತೆ 40 ವರ್ಷದೊಳಗಿನ 33 ಯುವ ಕಲಾವಿದರಿಗೆ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.