ADVERTISEMENT

ಮಾಜಿ ರಾಷ್ಟ್ರಪತಿ ಕಲಾಂ ವಿಧಿವಶ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 20:41 IST
Last Updated 27 ಜುಲೈ 2015, 20:41 IST

ಶಿಲ್ಲಾಂಗ್‌ (ಪಿಟಿಐ): ‘ಭಾರತದ ಕ್ಷಿಪಣಿ ಪಿತಾಮಹ’ ಹಾಗೂ ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಖ್ಯಾತರಾಗಿದ್ದ ಎ.ಪಿ.ಜೆ. ಅಬ್ದುಲ್‌ ಕಲಾಂ (84) ಇಲ್ಲಿನ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.

ಭಾರತೀಯ ನಿರ್ವಹಣಾ ಸಂಸ್ಥೆಯಲ್ಲಿ ಉಪನ್ಯಾಸ ನೀಡಲು ಸಂಜೆ 5.40ಕ್ಕೆ ಬಂದ ಕಲಾಂ ಅವರು ಕೆಲ ಕ್ಷಣ ವಿರಮಿಸಿ 6.35ಕ್ಕೆ ಉಪನ್ಯಾಸ ಶುರು ಮಾಡಿದರು. ಇದಾಗಿ ಐದೇ ನಿಮಿಷದಲ್ಲಿ ಅವರು ಹಠಾತ್ತನೆ ಕುಸಿದುಬಿದ್ದರು.

ತೀವ್ರ ಅಸ್ವಸ್ಥರಾಗಿದ್ದ ಅವರನ್ನು  ಇಲ್ಲಿಗೆ ಸಮೀಪದ ನೊಂಗ್ರಿಮ್ ಹಿಲ್ಸ್‌ನ ಬೆಥನಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.  ತಕ್ಷಣವೇ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

‘ಕಲಾಂ ಮರಣವನ್ನು ರಾತ್ರಿ 7.30ಕ್ಕೆ ವೈದ್ಯರು ಖಚಿತಪಡಿಸಿದರು’ ಎಂದು ಐಐಎಂ ನಿರ್ದೇಶಕ ಪ್ರೊ.ಡೇ ಹೇಳಿದರು.

‘ಆಸ್ಪತ್ರೆಗೆ ಕರೆತರುವಾಗ ಅವರು ಯಾವುದೇ ರೀತಿಯಿಂದಲೂ ಸ್ಪಂದಿಸುತ್ತಿರಲಿಲ್ಲ, ಬದುಕುಳಿದಿದ್ದ ಯಾವುದೇ ಲಕ್ಷಣಗಳೂ ಕಾಣಿಸಲಿಲ್ಲ’ ಎಂದು ಬೆಥನಿ ಆಸ್ಪತ್ರೆಯಲ್ಲಿ ಕಲಾಂ ಅವರಿಗೆ ಚಿಕಿತ್ಸೆ ನೀಡಿದ ಡಾ. ಎ.ಎಂ. ಖರ್ಬಾಮನ್‌  ಸುದ್ದಿಸಂಸ್ಥೆಗೆ ತಿಳಿಸಿದರು.

ಟ್ವೀಟ್‌: ‘ಶಿಲ್ಲಾಂಗ್‌ಗೆ ಹೋಗುತ್ತಿದ್ದೇನೆ. ‘ವಾಸಿಸಬಹುದಾದ ಗ್ರಹ’ ಬಗ್ಗೆ ಐಐಎಂನಲ್ಲಿ ಉಪನ್ಯಾಸ ನೀಡುತ್ತೇನೆ’ ಎಂದು ಕಲಾಂ ಕೊನೆಯ ಟ್ವೀಟ್‌ ಮಾಡಿದ್ದರು.

ಶೋಕಾಚರಣೆ ಮಾತ್ರ ಸರ್ಕಾರಿ ರಜೆ ಇಲ್ಲ
ಬೆಂಗಳೂರು: ‘ಡಾ. ಕಲಾಂ  ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಕಾಲ ಶೋಕಾಚರಣೆಗೆ ಸರ್ಕಾರ ನಿರ್ಧರಿಸಿದೆ.

ಆದರೆ ರಜೆ ಘೋಷಿಸಿಲ್ಲ’ ಎಂದು ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಕ್ರಮ ರದ್ದು: ಮಂಗಳವಾರ ರಾಜ್ಯದಲ್ಲಿ ಆಯೋಜನೆಯಾಗಿದ್ದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಕಾರ್ಯಕ್ರಮಗಳು ರದ್ದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT