ADVERTISEMENT

ಮಾನವ ಗುರಾಣಿ ಪ್ರಕರಣ: ಜಮ್ಮು ಕಾಶ್ಮೀರ ಮಾನವಹಕ್ಕು ಆಯೋಗದಿಂದ ವಿಚಾರಣೆ

ಪಿಟಿಐ
Published 25 ಮೇ 2017, 14:30 IST
Last Updated 25 ಮೇ 2017, 14:30 IST
ಮಾನವ ಗುರಾಣಿ ಪ್ರಕರಣ: ಜಮ್ಮು ಕಾಶ್ಮೀರ ಮಾನವಹಕ್ಕು ಆಯೋಗದಿಂದ ವಿಚಾರಣೆ
ಮಾನವ ಗುರಾಣಿ ಪ್ರಕರಣ: ಜಮ್ಮು ಕಾಶ್ಮೀರ ಮಾನವಹಕ್ಕು ಆಯೋಗದಿಂದ ವಿಚಾರಣೆ   

ಶ್ರೀನಗರ: ವ್ಯಕ್ತಿಯೊಬ್ಬರನ್ನು ಸೇನೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ ಪ್ರಕರಣದ ವಿಚಾರಣೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾನವಹಕ್ಕುಗಳ ಆಯೋಗ ವಿಚಾರಣೆ ನಡೆಸಲಿದೆ.

ಕಲ್ಲುತೂರಾಟದಿಂದ ರಕ್ಷಣೆ ಪಡೆಯುವ ಸಲುವಾಗಿ ಫಾರೂಕ್‌ ಅಹಮದ್‌ ಧರ್‌ ಎಂಬುವವರನ್ನು ಸೇನೆಯ ಜೀಪಿಗೆ ಕಟ್ಟಿ ಬದ್‌ಗಾಂ ಜಿಲ್ಲೆಯ ಹಳ್ಳಿಗಳಲ್ಲಿ ಏಪ್ರಿಲ್ 19ರಂದು ಮೆರವಣಿಗೆ ಮಾಡಲಾಗಿತ್ತು. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ನ್ಯಾಯ ಮತ್ತು ಮಾನವಹಕ್ಕುಗಳ ಅಂತರರಾಷ್ಟ್ರೀಯ ವೇದಿಕೆ (ಐಎಫ್‌ಜೆಎಚ್‌ಆರ್‌ಜೆಕೆ) ರಾಜ್ಯ ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ಜೂನ್‌ 5ಕ್ಕೆ ವಿಚಾರಣೆ ನಡೆಯಲಿದೆ.

‘ಘಟನೆಗೆ ಸಂಬಂಧಿಸಿ ರಾಜ್ಯ ಮಾನವಹಕ್ಕುಗಳ ಆಯೋಗಕ್ಕೆ ಏಪ್ರಿಲ್ 17ರಂದೇ ದೂರು ನೀಡಿದ್ದೇವೆ. ಆಯೋಗವು ಬದ್‌ಗಾಂನ ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್‌ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಐಎಫ್‌ಜೆಎಚ್‌ಆರ್‌ಜೆಕೆಯ ಅಧ್ಯಕ್ಷ ಎಂ. ಅಶಾನ್ ಉಂಟೂ ತಿಳಿಸಿದ್ದಾರೆ.

ADVERTISEMENT

ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು 7 ಮಂದಿ ಸಾಕ್ಷಿಗಳ ಜತೆ ಪೊಲೀಸ್ ಅಧಿಕಾರಿಯು ಮಾನವಹಕ್ಕುಗಳ ಆಯೋಗಕ್ಕೆ ಸಲ್ಲಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಧರ್ ಅವರನ್ನು ಶ್ರೀನಗರದ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಮಾನವ ಗುರಾಣಿ ಘಟನೆ ನಂತರ ಅವರು ಮಾನಸಿಕವಾಗಿ ಸಮಸ್ಯೆಗಳಿಗೆ ತುತ್ತಾಗಿರುವುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಉಂಟೂ ತಿಳಿಸಿದ್ದಾರೆ.

ಧರ್ ಅವರನ್ನು ಮಾನವ ಗುರಾಣಿಯಾಗಿ ಬಳಸಿದ್ದಾರೆ ಎನ್ನಲಾದ ಮೇಜರ್ ಲೀತುಲ್ ಗೊಗೊಯಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯ ಆಧಾರದಲ್ಲಿ ಇನ್ನೆರಡು ಅರ್ಜಿಗಳನ್ನು ಮಾನವಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗಿದೆ. ಇವುಗಳನ್ನೂ ಪ್ರಮುಖ ಅರ್ಜಿಗಳ ಜತೆ ಪರಿಗಣಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

ಮಾನವ ಗುರಾಣಿಯಾಗಿ ಬಳಸಿರುವುದನ್ನು ಗೊಗೊಯಿ ಅವರು ಸಮರ್ಥಿಸಿಕೊಂಡಿದ್ದಾರೆ. ಅವರು ನಿಯಮವನ್ನು ಉಲ್ಲಂಘಿಸಿರುವುದು ಅವರ ಹೇಳಿಕೆಯಿಂದ ತಿಳಿದುಬರುತ್ತದೆ ಎಂದು ಉಂಟೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.