ADVERTISEMENT

ಮಾಳವೀಯಗೆ ಮರಣೋತ್ತರ ‘ಭಾರತರತ್ನ’

43 ಪದ್ಮ ಪ್ರಶಸ್ತಿ ಪ್ರದಾನ, ಉಳಿದ 60 ಮಂದಿಗೆ ಮುಂದಿನ ತಿಂಗಳು ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 20:43 IST
Last Updated 30 ಮಾರ್ಚ್ 2015, 20:43 IST

ನವದೆಹಲಿ (ಪಿಟಿಐ): ಹೆಸರಾಂತ ಶಿಕ್ಷಣ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಮದನ್‌ ಮೋಹನ್‌ ಮಾಳವೀಯ ಅವರಿಗೆ  ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ‘ಭಾರತರತ್ನ’  ಪ್ರಶಸ್ತಿಯನ್ನು ಮರಣೋತ್ತರವಾಗಿ ಇಲ್ಲಿ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾಳವೀಯ ಅವರ ಕುಟುಂಬ ಸದಸ್ಯರು ರಾಷ್ಟ್ರಪತಿಗಳಿಂದ ಈ ಗೌರವವನ್ನು ಸ್ವೀಕರಿಸಿದರು. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಳವೀಯ ಅವರು ಹಿಂದೂ ರಾಷ್ಟ್ರದ ಚಿಂತನೆಯಿಂದ ಹೆಸರಾಗಿದ್ದರು.

ಇದೇ ವೇಳೆ ಬಿಜೆಪಿಯ ನಾಯಕ ಎಲ್‌.ಕೆ. ಅಡ್ವಾಣಿ ಮತ್ತು ಪಂಜಾಬ್‌ನ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ನಾಯಕ ಪ್ರಕಾಶ್‌ ಸಿಂಗ್‌ ಬಾದಲ್‌ ಸೇರಿದಂತೆ ಹಲವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಟ್ಟು 103 ಜನರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದ್ದು, 43 ಜನರಿಗೆ ಸೋಮವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಒಂಬತ್ತು ಮಂದಿ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.

ಉಳಿದ 60 ಪದ್ಮ  ಪ್ರಶಸ್ತಿಗಳನ್ನು ಮುಂದಿನ ತಿಂಗಳ ನೀಡಲಾಗುವುದು. ಈ ಸಮಾರಂಭಕ್ಕಾಗಿ ಏ. 8ರ ದಿನಾಂಕವನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.‌

*ಪ್ರಶಸ್ತಿ ತಡವಾಗಿ ಬಂದಿದೆ. ಆದರೂ ಅವರ ಜೀವಿತಾವಧಿಯಲ್ಲಿ ಮಾಡಿದ ರಚನಾತ್ಮಕ ಕೆಲಸಗಳಿಗಾಗಿ ಅವರಿಗೆ ಸಿಕ್ಕ ಮಾನ್ಯತೆ ಇದು.
ಆಶಾ ಪ್ರಾಣ್‌, ವ್ಯಂಗ್ಯಚಿತ್ರಕಾರ ಪ್ರಾಣ್‌ ಅವರ ಪತ್ನಿ

ಸತ್ಪಾಲ್‌, ಕುಸ್ತಿಪಟು ಸುಶೀಲ್‌ಕುಮಾರ್, ಅಶೋಕ್‌ ಸೇಟ್‌, ಎನ್‌. ಗೋಪಾಲಸ್ವಾಮಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಚಲನಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ, ಗೀತ ರಚನೆಗಾರ ಪ್ರಸೂನ್‌ ಜೋಶಿ, ವೈದ್ಯರಾದ ಡಾ. ರಣದೀಪ್‌ ಗುಲೇರಿಯಾ, ವ್ಯಂಗ್ಯಚಿತ್ರಕಾರ ಪ್ರಾಣ್‌ ಕುಮಾರ್‌ ಶರ್ಮ (ಮರಣೋತ್ತರ), ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು, ಹಾಕಿ ಕ್ಯಾಪ್ಟನ್‌ ಸರ್ದಾರ್‌ ಸಿಂಗ್‌ ಮತ್ತು ಪರ್ವತಾರೋಹಿ ಅರುಣಿಮಾ ಸಿನ್ಹಾ  ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಗೃಹ ಸಚಿವ ರಾಜನಾಥ ಸಿಂಗ್‌ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೇರಿದಂತೆ ಸಂಪುಟದ ಹಿರಿಯ ಸಹೋದ್ಯೋಗಿಗಳು ಸಮಾರಂಭದಲ್ಲಿ ಹಾಜರಿದ್ದರು.

ಕಳೆದ ವಾರ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ‘ಭಾರತರತ್ನ’ ಗೌರವವನ್ನು ಅವರ ಸ್ವಗೃಹದಲ್ಲಿ ರಾಷ್ಟ್ರಪತಿಗಳು   ಪ್ರದಾನ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.