ADVERTISEMENT

ಮುಕ್ತ ಅಂತರ್ಜಾಲ: ಚರ್ಚೆಗೆ ರಾಹುಲ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2015, 6:27 IST
Last Updated 22 ಏಪ್ರಿಲ್ 2015, 6:27 IST

ನವದೆಹಲಿ (ಪಿಟಿಐ): ದೇಶದಾದ್ಯಂತ ಅಂತರ್ಜಾಲ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ (ಮುಕ್ತ ಅಂತರ್ಜಾಲ) ನಡೆಯುತ್ತಿರುವ ಚರ್ಚೆಗೆ ಈಗ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಹ ಕೈಜೋಡಿಸಿದ್ದಾರೆ.

ಬುಧವಾರ ಬಜೆಟ್‌ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ  ಈ ವಿಷಯ ಪ್ರಸ್ತಾಪಿಸಿದ ಅವರು,  ಅಂತರ್ಜಾಲ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸರ್ಕಾರ ತಟಸ್ಥ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದರು. ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿ ಕೂಡಲೇ ಚರ್ಚೆಗೆ ಅವಕಾಶ ನೀಡಬೇಕು,  ನಿಲುವಳಿ ಸೂಚನೆ  ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಅಂತರ್ಜಾಲ ಸ್ವಾತಂತ್ರ್ಯ ವಿಚಾರದಲ್ಲಿ ಕೇಂದ್ರ ಸರ್ಕಾರ ತಟಸ್ಥ ಧೋರಣೆ  ಅನುಸರಿಸುತ್ತಿದೆ. ಇದರ ವಿರುದ್ಧ ಖಂಡನಾ ನಿರ್ಣಯ  ಅಂಗೀಕರಿಸಬೇಕು ಎಂದು ಅವರು ಹೇಳಿದರು. ಆದರೆ, ನಿರ್ಣಯ ಅಂಗೀಕರಿಸಬೇಕೇ ಬೇಡವೇ ಎನ್ನುವುದನ್ನು ಸ್ಪೀಕರ್‌ ನಿರ್ಧರಿಸಲಿದ್ದಾರೆ.

ಮಂಗಳವಾರ ಕೆಳಮನೆಯಲ್ಲಿ ಕೂಡ ಅಂತರ್ಜಾಲ ಸ್ವಾತಂತ್ರ್ಯದ ಕುರಿತು ಬಿರುಸಿನ ಚರ್ಚೆ ನಡೆದಿತ್ತು.

ಹಿನ್ನೆಲೆ: ದೂರಸಂಪರ್ಕ ಸಂಸ್ಥೆ ಭಾರ್ತಿ ಏರ್‌ಟೆಲ್‌ ಈಚೆಗೆ ‘ಏರ್‌ಟೆಲ್‌ ಝೀರೊ’ ಎಂಬ ವ್ಯವಸ್ಥೆಗೆ ಚಾಲನೆ ನೀಡಿದ ನಂತರ ಅಂತರ್ಜಾಲ ಸ್ವಾತಂತ್ರ್ಯದ ಚರ್ಚೆ ಆರಂಭ ಗೊಂಡಿತ್ತು. ಈ ವ್ಯವಸ್ಥೆಯ ಪ್ರಕಾರ ಕೆಲವು ನಿರ್ದಿಷ್ಟ ಆ್ಯಪ್‌ಗಳು ಉಚಿತವಾಗಿ ಲಭ್ಯವಾಗಲಿವೆ. ಅದರ ಶುಲ್ಕವನ್ನು ಆ್ಯಪ್‌ ತಯಾರಿಸಿದ ಸಂಸ್ಥೆಗಳೇ ಭರಿಸುತ್ತವೆ.

ಆದರೆ, ಈ ಕ್ರಮ ಕೆಲವೇ ಕೆಲವರ ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆ. ಸಣ್ಣ ಸಂಸ್ಥೆಗಳು ಮುಚ್ಚಿ ಹೋಗುತ್ತವೆ ಎಂದು ಅಂತರ್ಜಾಲ ಸ್ವಾತಂತ್ರ್ಯದ ಪ್ರತಿಪಾದಕರು ಮತ್ತು ಉದ್ಯಮ ಸಂಸ್ಥೆಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.