ADVERTISEMENT

ಮೃಣಾಲಿನಿ ಸಾರಾಭಾಯಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 19:38 IST
Last Updated 21 ಜನವರಿ 2016, 19:38 IST
ನೃತ್ಯಾಂಜಲಿ...  ಗುರುವಾರ ನಿಧನರಾದ ಹಿರಿಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಅವರಿಗೆ ಮಗಳು ಮಲ್ಲಿಕಾ ಸಾರಾಭಾಯಿ ನೃತ್ಯದ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದರು   –ಪಿಟಿಐ ಚಿತ್ರ
ನೃತ್ಯಾಂಜಲಿ... ಗುರುವಾರ ನಿಧನರಾದ ಹಿರಿಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಅವರಿಗೆ ಮಗಳು ಮಲ್ಲಿಕಾ ಸಾರಾಭಾಯಿ ನೃತ್ಯದ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದರು –ಪಿಟಿಐ ಚಿತ್ರ   

ಅಹಮದಾಬಾದ್‌: ಹೆಸರಾಂತ ಶಾಸ್ತ್ರೀಯ ನೃತ್ಯಗಾರ್ತಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮೃಣಾಲಿನಿ ಸಾರಾಭಾಯಿ (97) ಅವರು ಗುರುವಾರ ಇಲ್ಲಿ ನಿಧನರಾದರು.

ಮೃಣಾಲಿನಿ ಅವರು ಭಾರತ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್‌ ಸಾರಾಭಾಯಿ ಅವರ ಪತ್ನಿ.
ಖ್ಯಾತ ನೃತ್ಯಗಾರ್ತಿ ಮಲ್ಲಿಕಾ ಸಾರಾಭಾಯಿ ಮೃಣಾಲಿನಿ ಅವರ ಪುತ್ರಿ. ಪುತ್ರ ಕಾರ್ತಿಕೇಯ ಸಾರಾಭಾಯಿ ಪರಿಸರ ಶಿಕ್ಷಣ ಕೇಂದ್ರದ ಸಂಸ್ಥಾಪಕ.

ಮೃಣಾಲಿನಿ ಅವರನ್ನು ಬುಧವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಮುಂಜಾನೆ ಅವರನ್ನು ಮನೆಗೆ ಕರೆತಂದ ಬಳಿಕ ಮೃತಪಟ್ಟರು. ಗಾಂಧಿನಗರ ಜಿಲ್ಲೆಯ ಪೆಥಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ಅಮ್ಮ ಶಾಶ್ವತವಾಗಿ ನೃತ್ಯದಲ್ಲಿ ತೊಡಗಿಸಿಕೊಳ್ಳಲು ನಮ್ಮನ್ನೆಲ್ಲ ಅಗಲಿದ್ದಾರೆ’ ಎಂದು ಪುತ್ರಿ ಮಲ್ಲಿಕಾ ಸಾರಾಭಾಯಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕುಟುಂಬ ಹಿನ್ನೆಲೆ: ಮೃಣಾಲಿನಿ ಅವರು ಮೇ 11 1918ರಲ್ಲಿ ಕೇರಳದಲ್ಲಿ ಜನಿಸಿದರು. ತಂದೆ ಡಾ.ಸ್ವಾಮಿನಾಥನ್‌ ಬ್ಯಾರಿಸ್ಟರ್‌ ಆಗಿದ್ದರು. ತಾಯಿ ಅಮ್ಮು ಸ್ವಾಮಿನಾಥನ್‌ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಂಸದೆಯಾಗಿದ್ದರು.

ಸಹೋದರಿ ಲಕ್ಷ್ಮಿ ಸೆಹಗಲ್‌, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರು ಸ್ಥಾಪಿಸಿದ್ದ ಆಜಾದ್‌ ಹಿಂದ್‌ ಫೌಜ್‌ನ ‘ಝಾನ್ಸಿ ರಾಣಿ ರೆಜಿಮೆಂಟ್‌’ಗೆ ಮುಖ್ಯಸ್ಥೆಯಾಗಿದ್ದರು. ಸಹೋದರ ಗೋವಿಂದ ಸ್ವಾಮಿನಾಥನ್‌ ಕೂಡ ಬ್ಯಾರಿಸ್ಟರ್‌ ಆಗಿದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.