ADVERTISEMENT

ಮೇಕೆದಾಟು ಅಣೆಕಟ್ಟು ನಿರ್ಮಾಣ ನಮ್ಮಹಕ್ಕು

ತಮಿಳುನಾಡು ವಿರೋಧಕ್ಕೆ ಕರ್ನಾಟಕದ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ನವದೆಹಲಿ: ‘ಕಾವೇರಿ ನ್ಯಾಯಮಂಡಳಿ ಐತೀರ್ಪು ಉಲ್ಲಂಘಿಸದೆ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿ­ಸು­ವುದು ನಮ್ಮ ಹಕ್ಕು’ ಎಂದು ಕರ್ನಾಟಕ ಪ್ರತಿಪಾದಿಸಿದೆ.

‘ಕರ್ನಾಟಕ ನ್ಯಾಯಮಂಡಳಿ ಐತೀರ್ಪು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ. ನ್ಯಾಯಮಂಡಳಿ ಐತೀರ್ಪು ಅನ್ವಯ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಕೊಡಬೇಕು. ಕಾನೂನಿನ ಚೌಕಟ್ಟಿ­ನೊಳಗೆ ನಿಗದಿಪಡಿಸಿರುವ ನೀರು ಪೂರೈಸಿದ ಬಳಿಕ ಉಳಿಯುವ ಹೆಚ್ಚುವರಿ ನೀರನ್ನು ಉಪಯೋಗಿ­ಸುವ ಹಕ್ಕು ನಮಗಿದೆ’ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಗುರುವಾರ ಪತ್ರಕರ್ತರಿಗೆ ತಿಳಿಸಿದರು.

ಉದ್ದೇಶಿತ ಜಲಾಶಯದ ‘ಸಮಗ್ರ ಯೋಜನಾ ವರದಿ’ (ಡಿಪಿಆರ್‌) ಸಿದ್ಧಪಡಿಸಲು ಜಾಗತಿಕ ಟೆಂಡರ್‌ ಕರೆಯಲಾಗಿದೆ. ಬೆಂಗಳೂರು ಮತ್ತು ಹಳೆ ಮೈಸೂರಿನ ಭಾಗದ ಕಾವೇರಿ ನದಿ ಪಾತ್ರದ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ಕೈಗೆತ್ತಿ­ಕೊಳ್ಳಲಾಗುತ್ತಿದೆ. ಬೆಂಗಳೂರು ನಗರದ ಮೂರನೇ ಎರಡರಷ್ಟು ಭಾಗ ಕುಡಿಯುವ ನೀರಿನ ಸಮಸ್ಯೆ ಎದುರಿ­ಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವರು ತಿಳಿಸಿದರು.

ಸಮಗ್ರ ಯೋಜನಾ ವರದಿ ಸಿದ್ಧತೆಗೆ ಈ ತಿಂಗಳ ಕೊನೆಯವರೆಗೆ ಗಡುವು ನೀಡಲಾಗಿತ್ತು. ಈ ಗಡುವನ್ನು ಡಿಸೆಂಬರ್‌ವರೆಗೂ ವಿಸ್ತರಿಸ­ಲಾಗಿದೆ ಎಂದು ಪಾಟೀಲ ಹೇಳಿದರು.

ಕರ್ನಾಟಕ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡವಾಗಿ ಯಾವುದೇ ಅಣೆಕಟ್ಟೆ ಕಟ್ಟಲು ಅವಕಾಶ ಕೊಡ­ಬಾರದು ಎಂದು ಮನವಿ ಮಾಡಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮಧ್ಯಾಂತರ ಅರ್ಜಿ ಸಲ್ಲಿಸಿದೆ. ಮಧ್ಯಪ್ರವೇಶ ಮಾಡುವಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದೆ.
ಜಲಾಶಯ ನಿರ್ಮಾಣಕ್ಕೆ ಅವಕಾಶ ಕೊಟ್ಟರೆ ತಮಿಳು ನಾಡು ಲಕ್ಷಾಂತರ ರೈತರಿಗೆ ತೊಂದರೆ ಆಗ­ಲಿದೆ ಎಂದು ತಿಳಿಸಿದೆ. ಕರ್ನಾಟಕದ ಕ್ರಮವನ್ನು ಪ್ರತಿಭಟಿಸಿ ರಸ್ತೆ ಹಾಗೂ ರೈಲು ತಡೆ ಚಳವಳಿಗೆ ತಮಿಳುನಾಡು ನಿರ್ಧರಿಸಿದೆ. ಈ ತಿಂಗಳ  22ರಂದು ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ.

ಅರಣ್ಯ ಇಲಾಖೆಯಿಂದಲೂ ವಿರೋಧ
ಬೆಂಗಳೂರು: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಗೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿದೆ.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾ (ವನ್ಯಜೀವಿ), ‘ಯೋಜನೆಗೆ ಒಪ್ಪಿಗೆ ನೀಡಲು ಇಲಾಖೆಗೆ ಈ ವರೆಗೆ ಯಾವುದೇ ಪ್ರಸ್ತಾವ ಬಂದಿಲ್ಲ. ಅಣೆಕಟ್ಟು ಕಟ್ಟುವ ವಿಷಯ ಮಾಧ್ಯಮಗಳ ವರದಿಯಿಂದ ಗೊತ್ತಾ­ಯಿತು. ಕೇಂದ್ರ ಅರಣ್ಯ ಇಲಾಖೆಯಿಂದ ಒಪ್ಪಿಗೆ ದೊರಕಿರುವ ವಿಷಯವೂ ಗೊತ್ತಿಲ್ಲ’ ಎಂದರು.

‘ಆನೆ ಹಾಗೂ ಹುಲಿಗಳ ತಾಣದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗೆ ಇಲಾಖೆ ಅನುಮತಿ ನೀಡುವುದಿಲ್ಲ. ಇದಕ್ಕೂ ನೀಡುವು­ದಿಲ್ಲ. ಇದರಿಂದ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಲಿದೆ. ಹಾಸನ ಭಾಗ­ದಲ್ಲಿ ನಡೆಯುತ್ತಿರುವ ಸಂಘರ್ಷವೇ ಇದಕ್ಕೆ ಜ್ವಲಂತ ಉದಾಹರಣೆ’ ಎಂದರು.

300 ಕ್ಯಾಮೆರಾ ಕೊಡುಗೆ: ಹುಲಿ ಸಂರಕ್ಷಣಾ ಕಾರ್ಯ­ದಲ್ಲಿ ನೆರವಾ­ಗಲು ‘ಸಿಎಸ್‌ಎಸ್‌ ಕಾರ್ಪ್‌’ ಸಂಸ್ಥೆ ಅರಣ್ಯ ಇಲಾಖೆಗೆ ಬುಧವಾರ 300 ಕ್ಯಾಮೆರಾ ಟ್ರಾಪ್‌ಗಳನ್ನು ನೀಡಿತು. ನಾಗರಹೊಳೆ ಹುಲಿ ಅಭಯಾರಣ್ಯಕ್ಕೆ 200 ಹಾಗೂ ದಾಂಡೇಲಿ ಹುಲಿ ಅಭಯಾರಣ್ಯಕ್ಕೆ 100 ಕ್ಯಾಮೆರಾ­ಗಳನ್ನು ನೀಡಲಾಯಿತು. ಸಂಸ್ಥೆಯ ಮುಖ್ಯ ಕಾರ್ಯ­ನಿರ್ವ­ಹಣಾಧಿಕಾರಿ ‘ಟೈಗರ್‌’ ರಮೇಶ್‌ ಅವರು ವಿನಯ್‌ ಲೂತ್ರಾ ಅವರಿಗೆ ಕ್ಯಾಮೆರಾ­ಗಳನ್ನು ಹಸ್ತಾಂತರಿ­ಸಿದರು. ಸಂಸ್ಥೆ ಕಾರ್ಪೊರೇಟ್‌ ಸಾಮಾಜಿಕ ಹೊಣೆ­ಗಾರಿಕೆ­­­ಯಡಿ (ಸಿಎಸ್‌ಆರ್‌) ಕಳೆದ ವರ್ಷ ಡಿಸೆಂಬರ್‌-­­ನಲ್ಲಿ 200 ಕ್ಯಾಮೆರಾಗಳನ್ನು ಇಲಾಖೆಗೆ ನೀಡಿತ್ತು.

ವಿನಯ್‌ ಲೂತ್ರಾ ಮಾತನಾಡಿ, ‘ಸ್ವಯಂ­ಸೇವಾ ಸಂಸ್ಥೆಗಳು ಹಾಗೂ ಕಾರ್ಪೊರೇಟ್‌ ಸಂಸ್ಥೆಗಳು ನೀಡಿ­ರುವ ಕ್ಯಾಮೆರಾಗಳನ್ನು ಹೊರತುಪಡಿಸಿ ಇಲಾಖೆಯೇ 400 ಕ್ಯಾಮೆರಾಗಳನ್ನು ಅಳವಡಿಸಿದೆ. ಬಂಡಿಪುರ­ದಲ್ಲಿ 200, ಬಿಳಿಗಿರಿ ರಂಗನ ಬೆಟ್ಟದಲ್ಲಿ 80, ಭದ್ರಾ ಅಭಯಾರಣ್ಯದಲ್ಲಿ 60, ದಾಂಡೇಲಿ­ಯಲ್ಲಿ 60, ಕಾವೇರಿ ಅಭಯಾ­ರಣ್ಯ, ಭೀಮಘಡ­ದಲ್ಲಿ 15 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದರು. ಈ ಸಂದರ್ಭ ನಾಗರಹೊಳೆ ಹುಲಿ ಅಭಯಾ­ರಣ್ಯದ ನಿರ್ದೇಶಕ ಆರ್‌. ಗೋಕುಲ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT