ADVERTISEMENT

ಮೇ ತಿಂಗಳಲ್ಲಿ ರಾಹುಲ್‌ಗೆ ಅಧಿಕಾರ ಹಸ್ತಾಂತರ?

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 20:18 IST
Last Updated 29 ಮಾರ್ಚ್ 2015, 20:18 IST

ನವದೆಹಲಿ (ಪಿಟಿಐ): ರಾಹುಲ್‌ ಗಾಂಧಿ ವಿಶ್ರಾಂತಿಯಿಂದ ಶೀಘ್ರವೇ ಮರಳಲಿದ್ದು, ಮೇ ವೇಳೆಗೆ ಅವರು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ದೆಹಲಿ ಮತ್ತು ಕಾಂಗ್ರೆಸ್‌ ಅಧಿಕಾರವಿರುವ ಹಿಮಾಚಲ ಪ್ರದೇಶದ ಅಥವಾ ಜಾರ್ಖಂಡ್‌ನಲ್ಲಿ ಮೇನಲ್ಲಿ ಕಾಂಗ್ರೆಸ್‌ ಕಾರ್ಯಕಾರಿಣಿ ಮತ್ತು ಎಐಸಿಸಿ ಸಭೆ ನಡೆಯುವ ಸಾಧ್ಯತೆ ಇದೆ. ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಭೆಗೆ ಆಗಮಿಸಿದರೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕು ಎಂದು ಪಕ್ಷದ ಹಿರಿಯರು ಅವರ ಮೇಲೆ ಒತ್ತಡ ಹೇರಲಿದ್ದಾರೆ.

ರಾಹುಲ್‌ ಅವರ ಸುದೀರ್ಘಕಾಲದ ಅನುಪಸ್ಥಿತಿಯ ಕುರಿತು ಚರ್ಚೆ ನಡೆದಿರುವುದರ  ಮಧ್ಯೆಯೇ  ಸೆ. 30ರೊಳಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಮಾ. 26ರಂದು  ಪಕ್ಷದ ಆಂತರಿಕ ಚುನಾವಣೆ ವೇಳಾಪಟ್ಟಿ ಪ್ರಕಟಿಸಿತು.

ರಾಹುಲ್‌  ಪಕ್ಷದ ಮುಖ್ಯಸ್ಥ ಹುದ್ದೆ ವಹಿಸಿಕೊಂಡರೆ ಸೋನಿಯಾ ಗಾಂಧಿ ಅವರು ಸಂಸದೀಯ ಪಕ್ಷದ ನಾಯಕಿಯಾಗಿ ಸಂಸದೀಯ ಕಾರ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಲಿದ್ದಾರೆ.

2013ರಲ್ಲಿ ಜೈಪುರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್‌ ಗಾಂಧಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ನಿರ್ಣಯವನ್ನು ಎಐಸಿಸಿ ಅನುಮೋದಿಸಿತ್ತು.  ರಾಹುಲ್‌ ಅವರಿಗೆ ಪಕ್ಷದ ಮುಖ್ಯಸ್ಥರ ಹುದ್ದೆ ವಹಿಸಲು ನಿರ್ಧರಿಸುವ  ಕಾಂಗ್ರೆಸ್ ಈ ಪ್ರಕ್ರಿಯೆಯನ್ನೇ ಅನುಸರಿಸಲಿದೆ ಎಂದು ಪಕ್ಷದ ಕೆಲ ನಾಯಕರು ಹೇಳಿದ್ದಾರೆ.  ರಾಹುಲ್‌ ಅವರಿಗೆ ಯಾವುದೇ ಕ್ಷಣ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ವಹಿಸಲಾಗುತ್ತದೆ ಎನ್ನುವ ಊಹಾಪೋಹಗಳೆದ್ದಿತ್ತು. ಆದರೆ,  ರಾಹುಲ್ ರಜೆ ಮೇಲೆ ತೆರಳಿದ ನಂತರ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳೆದ್ದಿತ್ತು. ಸೋನಿಯಾ ಗಾಂಧಿ ನಿರಂತರ 17 ವರ್ಷ ಪಕ್ಷದ ಅಧ್ಯಕ್ಷೆಯಾಗಿ ಅಧಿಕಾರ ನಿರ್ವಹಿಸಿ ದಾಖಲೆ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.