ನವದೆಹಲಿ (ಪಿಟಿಐ): ಕಳೆದ ವರ್ಷ ಬಿಹಾರದ ಪಟ್ನಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸ್ಫೋಟದ ಸೂತ್ರಧಾರಿ ಎನ್ನಲಾಗಿರುವ ಹೈದರ್ ಅಲಿ ಅಲಿಯಾಸ್ ‘ಬ್ಲ್ಯಾಕ್ ಬ್ಯೂಟಿ’ ಮತ್ತು ಒಬ್ಬ ಬಾಲಕ ಸೇರಿದಂತೆ ಒಟ್ಟು ನಾಲ್ವರು ಶಂಕಿತರನ್ನು ಬಂಧಿಸಿದೆ.
‘ಅಲಿ ಅವರನ್ನು ಹೊರತು ಪಡಿಸಿ ತೌಫಿಕ್ ಅನ್ಸಾರಿ, ಮೊಜಿಬುಲ್ ಮತ್ತು ನುಮನ್ ಅನ್ಸಾರಿ ಅವರನ್ನು ರಾಂಚಿಯಲ್ಲಿ ಬಂಧಿಸಲಾಗಿದೆ. ಇದು ನಮಗೆ ಸಿಕ್ಕ ದೊಡ್ಡ ಯಶಸ್ಸು’ ಎಂದು ಎನ್ಐಎ ಮಹಾನಿರ್ದೇಶಕ ಶದರ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ನಿಷೇಧಿತ ಉಗ್ರ ಸಂಘಟನೆ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿರುವ ಇವರು ಕಳೆದ ವರ್ಷ ಅ.27 ರಂದು ಪಟ್ನಾದಲ್ಲಿ ಆಯೋಜಿಸಲಾಗಿದ್ದ ರ್್ಯಾಲಿಯಲ್ಲಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟ ಮಾಡುವ ಸಂಚು ರೂಪಿಸಿದ್ದರು ಎಂದು ಅವರು ಹೇಳಿದರು.
‘ಮೋದಿ ರ್್ಯಾಲಿ ಆಯೋಜನೆ ಆಗಿದ್ದ ಸ್ಥಳಕ್ಕೆ ಭೇಟಿ ನೀಡಿ ಅವರ (ಮೋದಿ) ಸಮೀಪಕ್ಕೆ ಹೋಗುವುದು ಹೇಗೆ ಎನ್ನುವ ಬಗ್ಗೆ ಯೋಜನೆ ರೂಪಿಸುತ್ತಿದ್ದೆವು’ ಎಂದು ಬಂಧಿತರು ತಿಳಿಸಿದ್ದಾರೆ’ ಎಂದು ಕುಮಾರ್ ಹೇಳಿದರು.
‘ಉಗ್ರರು ಅಕ್ಬರ್ಪುರ, ಕಾನ್ಪುರ್ (ಉತ್ತರ ಪ್ರದೇಶ), ದೆಹಲಿ ಮತ್ತು ಪಟ್ನಾಗೆ ಹೋಗಿ ಅಲ್ಲಿ ಸ್ಫೋಟ ನಡೆಸುವ ಕುರಿತು ಯೋಜನೆ ರೂಪಿಸಿದ್ದರು. ಆದರೆ ಮೋದಿ ಅವರ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೋದಿ ಅವರಿದ್ದ ಸ್ಥಳದಲ್ಲಿ ಬಾಂಬ್ ಇಡುವುದು ಅವರಿಗೆ ಸಾಧ್ಯವಾಗಿರಲಿಲ್ಲ’ ಎಂದು ಅವರು ವಿವರಿಸಿದರು.
ಹಿಂದೂತ್ವ ಉಗ್ರರ ಪ್ರಕರಣಗಳ ತನಿಖೆ
ನಿಲ್ಲದು–ಎನ್ಐಎ: ಅಧಿಕಾರದಿಂದ ನಿರ್ಗಮಿಸುತ್ತಿರುವ ಯುಪಿಎ ಸರ್ಕಾರ ವಹಿಸಿದ ಹಿಂದೂತ್ವ ಉಗ್ರರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಮುಂದುವರಿಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಧಾನ ನಿರ್ದೇಶಕ ಶರದ್ ಕುಮಾರ್ ಬುಧವಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.