ADVERTISEMENT

ಮೋದಿಯನ್ನು ಪಾಕ್ ಗೆ ಕಳುಹಿಸಬೇಕು

​ಪ್ರಜಾವಾಣಿ ವಾರ್ತೆ
Published 1 ಮೇ 2014, 11:19 IST
Last Updated 1 ಮೇ 2014, 11:19 IST

ಪಾಟ್ನಾ(ಪಿಟಿಐ): ಪಾಕಿಸ್ತಾನದ ಆಂತರಿಕ ಸಚಿವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಗುರುವಾರ ವಾಗ್ದಾಳಿ ಮುಂದುವರಿಸಿರುವ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಅವರು 'ಮೋದಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು' ಎಂದಿದ್ದಾರೆ. 

‘ನರೇಂದ್ರ ಮೋದಿ ಪ್ರಧಾನಿ ಆದರೆ ಪ್ರಾದೇಶಿಕ ಶಾಂತಿ ಅಸ್ಥಿರಗೊಳ್ಳಲಿದೆ’ ಎಂಬ ಪಾಕ್ ನ ಆಂತರಿಕ ಸಚಿವ ಚೌಧರಿ ನಿಸಾರ್‌ ಅಲಿ ಖಾನ್ ನೀಡಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು ‘ಮೋದಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದೊಂದೇ ಅವರಿಗೆ ಉತ್ತಮ ಮದ್ದು, ನಂತರವಷ್ಟೇ, ಅಸ್ಥಿರತೆಯ ಪ್ರಶ್ನೆ ಉದ್ಭವಿಸುತ್ತದೆ. ಅವರ ಜನರು ಇತರರನ್ನು ಪಾಕಿಸ್ತಾನಕ್ಕೆ ಅಟ್ಟುವ ಮಾತನಾಡುತ್ತಾರೆ. ಇದಕ್ಕೆ ಬದಲಾಗಿ ನಾವು ಮೋದಿ ಅವರನ್ನೇ ಪಾಕಿಸ್ತಾನಕ್ಕೆ ಕಳುಹಿಸಬೇಕು’ ಎಂದು ಲಾಲು ಗುಡುಗಿದರು.

ಇದೇ ವೇಳೆ, ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮೋದಿ ಅವರ ವಿರುದ್ಧ ಎರಡು ಎಫ್‍ಐಆರ್‍ ದಾಖಲಾಗಿರುವ ವಿಚಾರವಾಗಿ ಮಾತನಾಡಿದ ಅವರು 'ಬಿಜೆಪಿ ನಾಯಕರ ಎಲ್ಲ ವಿವಾದಗಳಿಗೆ ಪಾಕಿಸ್ತಾನವೊಂದೇ ಮದ್ದು' ಎಂದರು.

'ಮೊದಲು ಅವರನ್ನು ಪಾಕಿಸ್ತಾನಕ್ಕೆ ಕಳುಹಿಸೋಣ. ನಂತರ ಚುನಾವಣಾ ಆಯೋಗ ದಾಖಲಿಸಿರುವ ಎಫ್‍ಐಆರ್‍ ಕುರಿತಾಗಿ ಯೋಚಿಸೋಣ' ಎಂದು ಲಾಲು ಹೇಳಿದರು.

ADVERTISEMENT

ಬಿಜೆಪಿ ತಿರುಗೇಟು:
ಮೋದಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂಬ ಲಾಲು ಪ್ರಸಾದ್‍ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಯ್ಯದ್‍ ಶಹನವಾಜ್‍ ಹುಸೇನ್‍ ಅವರು 'ಮೋದಿ ಬದಲಾಗಿ ಲಾಲು ಅವರನ್ನೇ ಏಕೆ ಪಾಕಿಸ್ತಾನಕ್ಕೆ ಕಳುಹಿಸಬಾರದು?, ಅವರೇ ಹೇಳುತ್ತಾರೆ ಆ ದೇಶದಲ್ಲಿ ಅವರು ತುಂಬಾ ಜನಪ್ರೀಯರೆಂದು. ಅವರನ್ನು ಅಲ್ಲಿಗೆ ಕಳುಹಿಸುವುದು ಉತ್ತಮ ನಿರ್ಧಾರವಾಗಬಲ್ಲದು' ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಅವರು 'ಪಾಕಿಸ್ತಾನವಾಗಲಿ ಅಥವಾ ಅದರ ಸಚಿವರುಗಳಾಗಲಿ ಭಾರತ ಕುರಿತಂತೆ ಮಾತನಾಡುವಾಗ ತಮ್ಮ ಮಿತಿಯನ್ನು ಅರಿವಿನಲ್ಲಿಟ್ಟುಕೊಳ್ಳಬೇಕು. ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸಲು ಅವರಿಗೆ ಯಾವುದೇ ಹಕ್ಕಿಲ್ಲ. ಯಾರು ಪ್ರಧಾನಿಯಾಗಬೇಕೆಂದು ದೇಶದ ಜನತೆ ನಿರ್ಧರಿಸುತ್ತಾರೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.