ADVERTISEMENT

ಯಥಾಸ್ಥಿತಿ ಮನವಿ ತಳ್ಳಿ ಹಾಕಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:30 IST
Last Updated 19 ಮಾರ್ಚ್ 2018, 19:30 IST
ಯಥಾಸ್ಥಿತಿ ಮನವಿ ತಳ್ಳಿ ಹಾಕಿದ ‘ಸುಪ್ರೀಂ’
ಯಥಾಸ್ಥಿತಿ ಮನವಿ ತಳ್ಳಿ ಹಾಕಿದ ‘ಸುಪ್ರೀಂ’   

ನವದೆಹಲಿ: 2011ನೇ ಸಾಲಿನಲ್ಲಿ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು ನಡೆಸಿರುವ ಆಯ್ಕೆ ಪ್ರಕ್ರಿಯೆ ಕುರಿತು ಯಥಾಸ್ಥಿತಿ ಕಾಪಾಡುವಂತೆ, ಆಯ್ಕೆಯಾದ ಅಭ್ಯರ್ಥಿಗಳ ಮನವಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಳ್ಳಿಹಾಕಿದೆ.

362 ಹುದ್ದೆಗಳಿಗಾಗಿ ನಡೆದಿದ್ದ ಆಯ್ಕೆ ಪ್ರಕ್ರಿಯೆಯು ಅಕ್ರಮದಿಂದ ಕೂಡಿದೆ ಎಂದು ಇತ್ತೀಚೆಗೆ (ಮಾರ್ಚ್‌ 9) ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ಪೀಠ, ಆಯ್ಕೆಯಾಗಿ ಉದ್ಯೋಗಕ್ಕೆ ಹಾಜರಾಗಿರುವ ಮತ್ತು 25 ಅಭ್ಯರ್ಥಿಗಳು ಸಲ್ಲಿಸಿರುವ ಇನ್ನೊಂದು ಮೇಲ್ಮನವಿಯೊಂದಿಗೆ ಈ ಅರ್ಜಿಯನ್ನೂ ಮಾರ್ಚ್‌ 27ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿತು.

‘ಈ ಕುರಿತು ಅಧಿಸೂಚನೆ ಹೊರಡಿಸಿ ನೇಮಕಾತಿ ಆದೇಶ ನೀಡಲಾಗಿದೆ. ನಂತರ ಸರ್ಕಾರ ಆಯ್ಕೆ ಪಟ್ಟಿ ರದ್ದುಪಡಿಸಲು ಮುಂದಾದಾಗ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಗೆ ಮೇಲ್ಮನವಿ ಸಲ್ಲಿಸಿ ಯಶಸ್ವಿಯಾಗಿದ್ದೇವೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ಆಧರಿಸಿ, ಹೈಕೋರ್ಟ್‌ ಆಯ್ಕೆ ಪ್ರಕ್ರಿಯೆ ರದ್ದುಪಡಿಸಿದೆ’ ಎಂದು ಅರ್ಜಿದಾರರ ಪರ ವಕೀಲರಾದ ಮುಕುಲ್‌ ರೋಹಟ್ಗಿ, ಬಿ.ವಿ. ಆಚಾರ್ಯ ಪೀಠಕ್ಕೆ ತಿಳಿಸಿದರು.

ADVERTISEMENT

‘ಆಯ್ಕೆಯಾಗಿದ್ದ ಎಲ್ಲ 362 ಅಭ್ಯರ್ಥಿಗಳ ಪೈಕಿ ಕೇವಲ 46 ಅಭ್ಯರ್ಥಿಗಳು ಕಳಂಕಿತರಾಗಿದ್ದಾರೆ’ ಎಂದು ಸರ್ಕಾರವೇ ತಿಳಿಸಿತ್ತು. ಆದರೆ, ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನೇ ಹೈಕೋರ್ಟ್‌ ರದ್ದುಪಡಿಸಿದೆ. ಇದು ಸರಿಯಲ್ಲ. ಅಲ್ಲದೆ, ಕಳಂಕಿತರಲ್ಲದ 316 ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಅವರು ಕೆಲಸಕ್ಕೂ ಹಾಜರಾಗಿದ್ದಾರೆ ಎಂದು ಅವರು ಹೇಳಿದರು.

ನೇಮಕಾತಿ ಆದೇಶ ಪಡೆದು ಕೆಲಸಕ್ಕೆ ಹಾಜರಾಗಿರುವ 25 ಅಭ್ಯರ್ಥಿಗಳನ್ನು ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂಬ ಮನವಿಯನ್ನು ತಳ್ಳಿ ಹಾಕಿದ ನ್ಯಾಯಪೀಠವು, ‘ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಲು ಸಾಧ್ಯವಿಲ್ಲ. ಸರ್ಕಾರ ಏನಾದರೂ ಕ್ರಮ ಕೈಗೊಳ್ಳಲಿ’ ಎಂದು ಹೇಳಿತಲ್ಲದೆ, ಮೇಲ್ಮನವಿಯ ಪ್ರತಿಯನ್ನು ರಾಜ್ಯ ಸರ್ಕಾರದ ಪರ ವಕೀಲರಿಗೆ ನೀಡಿ ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.