ADVERTISEMENT

ಯೋಧ ಕೊಪ್ಪದ ಸ್ಥಿತಿ ಮತ್ತಷ್ಟು ಗಂಭೀರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 10:21 IST
Last Updated 10 ಫೆಬ್ರುವರಿ 2016, 10:21 IST
ಯೋಧ ಕೊಪ್ಪದ ಸ್ಥಿತಿ ಮತ್ತಷ್ಟು ಗಂಭೀರ
ಯೋಧ ಕೊಪ್ಪದ ಸ್ಥಿತಿ ಮತ್ತಷ್ಟು ಗಂಭೀರ   

ನವದೆಹಲಿ (ಪಿಟಿಐ): ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಆರು ದಿನಗಳ ಹಿಂದೆ ಹಿಮಪಾತಕ್ಕೆ ಸಿಲುಕಿ ಪವಾಡಸದೃಶವಾಗಿ ಬದುಕುಳಿದ ಯೋಧ ಹನುಮಂತಪ್ಪ ಕೊಪ್ಪದ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು  ದೆಹಲಿಯ ಸೇನಾ ಆಸ್ಪತ್ರೆ ವೈದ್ಯರು ಬುಧವಾರ ತಿಳಿಸಿದ್ದಾರೆ.

ಹನುಮಂತಪ್ಪ ಕೊಪ್ಪದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ಆಸ್ಪತ್ರೆಯು ಮಾಹಿತಿ ನೀಡಿದೆ. ಅದೃಷ್ಟವಶಾತ್‌, ಅತಿ ಶೀತಕ್ಕೆ ತೆರೆದುಕೊಳ್ಳುವುದರಿಂದ ಉಂಟಾಗುವ ಹಿಮ ಕಡಿತ ಅಥವಾ ಎಲುಬು ಮುರಿತ ಅವರಿಗೆ ಆಗಿಲ್ಲ ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದರಿಂದ ಶ್ವಾಸಕೋಶ ಮತ್ತು ಶ್ವಾಸನಾಳಗಳನ್ನು ರಕ್ಷಿಸುವುದಕ್ಕಾಗಿ ಕೊಪ್ಪದ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ದೇಹವನ್ನು ಬೆಚ್ಚಗಾಗಿಸುವ ಮತ್ತು ತಣ್ಣಗಾಗಿ ಹೋಗಿರುವ ದೇಹದ ಭಾಗಗಳಿಗೆ ರಕ್ತ ಹರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಇದಕ್ಕೆ ಹೊಂದಿಕೊಳ್ಳಲು ದೇಹ ಶ್ರಮಿಸುವಾಗ ಕೆಲವು ಸಮಸ್ಯೆಗಳು ಉಂಟಾಗಬಹುದು. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದು ರಕ್ತದೊತ್ತಡ ಅತ್ಯಂತ ಕಡಿಮೆ ಇದೆ. ಪಿತ್ತಜನಕಾಂಗ ಮತ್ತು ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೇಹದಲ್ಲಿ ತೇವಾಂಶ ಇಲ್ಲ, ದೇಹದ ಉಷ್ಣತೆ, ರಕ್ತದಲ್ಲಿನ ಸಕ್ಕರೆ ಅಂಶ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಮತ್ತು  ಆಮ್ಲಜನಕ ಕೊರತೆ ತೀವ್ರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT