ADVERTISEMENT

ರಾಜನ್‌ ಬೆಂಬಲಕ್ಕೆ ಮೋದಿ

ಸುಬ್ರಮಣಿಯನ್ ಸ್ವಾಮಿ ಟೀಕೆಗೆ ಪ್ರಧಾನಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 23:00 IST
Last Updated 27 ಜೂನ್ 2016, 23:00 IST
-ನರೇಂದ್ರ ಮೋದಿ, ಪ್ರಧಾನಿ
-ನರೇಂದ್ರ ಮೋದಿ, ಪ್ರಧಾನಿ   

ನವದೆಹಲಿ (ಪಿಟಿಐ): ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ರಿಸರ್ವ್‌ ಬ್ಯಾಂಕ್ ಗವರ್ನರ್‌ ರಘುರಾಂ ರಾಜನ್‌ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸ್ವಾಮಿ ಅವರು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದು ಕೂಡ ಪ್ರಧಾನಿಯವರಲ್ಲಿ ಅತೃಪ್ತಿ ಮೂಡಿಸಿದೆ. ‘ಟೈಮ್ಸ್‌ ನೌ’ ಸುದ್ದಿವಾಹಿನಿಯಲ್ಲಿ ಸೋಮವಾರ ಪ್ರಸಾರವಾದ ಸಂದರ್ಶನದಲ್ಲಿ ಪ್ರಧಾನಿಯವರು, ‘ದೇಶಭಕ್ತಿಯ ವಿಚಾರದಲ್ಲಿ ರಾಜನ್‌ ಯಾರಿಗೂ ಕಡಿಮೆಯಲ್ಲ’ ಎಂದು ಹೇಳಿದರು.

‘ವ್ಯವಸ್ಥೆಗಿಂತಲೂ ತಾನು ಮೇಲು ಎಂದು ಭಾವಿಸುವುದು ತಪ್ಪು’ ಎನ್ನುವ ಮೂಲಕ ಮೋದಿ ಅವರು, ಸ್ವಾಮಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ‘ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದ್ದರೂ, ಇಂಥ ಹೇಳಿಕೆಗಳು ಒಳ್ಳೆಯದಲ್ಲ. ಪ್ರಚಾರದ ಉದ್ದೇಶಕ್ಕೆ ಹೀಗೆ ಮಾತನಾಡುವುದರಿಂದ ದೇಶಕ್ಕೇನೂ ಒಳಿತಾಗದು. ಜನ ಜವಾಬ್ದಾರಿ ಅರಿತು ವರ್ತಿಸಬೇಕು’ ಎಂದು ಮೋದಿ ಹೇಳಿದರು.

ರಾಜನ್‌, ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌  ಮತ್ತು ಆರ್ಥಿಕ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ ದಾಸ್‌ ವಿರುದ್ಧ  ಸ್ವಾಮಿ ಈಚೆಗೆ ಆರೋಪಗಳನ್ನು ಮಾಡಿದ್ದರು. ‘ರಾಜನ್ ಅವರು ಮಾನಸಿಕವಾಗಿ ಪೂರ್ತಿಯಾಗಿ ಭಾರತೀಯರಲ್ಲ’ ಎಂದೂ ಸ್ವಾಮಿ ಆರೋಪಿಸಿದ್ದರು. ಅವರ ಹೇಳಿಕೆಗಳಿಗೆ ಬಿಜೆಪಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಈ  ಕಾರಣದಿಂದ ಪ್ರಧಾನಿಯವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ರಾಜನ್‌ ಗುಣಗಾನ: ಆರ್‌ಬಿಐ ಗವರ್ನರ್‌ ಹುದ್ದೆಯಲ್ಲಿ ಇನ್ನೊಂದು ಅವಧಿಗೆ ಮುಂದುವರಿಯಲಾರೆ ಎಂದು ರಾಜನ್ ಹೇಳಿದ್ದರೂ, ಅವರ ಕಾರ್ಯವೈಖರಿಯನ್ನು ಮೋದಿ ಪ್ರಶಂಸಿಸಿದ್ದಾರೆ. ರಾಜನ್‌ ಅವರು ಯಾವುದೇ ಹುದ್ದೆಯಲ್ಲಿರಲಿ, ಅವರು ದೇಶಕ್ಕೆ ಸೇವೆ ಸಲ್ಲಿಸುತ್ತಿರುತ್ತಾರೆ ಎಂದು ಮೋದಿ ಮೆಚ್ಚುಗೆಯ ಮಾತು ಹೇಳಿದರು.

‘ರಾಜನ್‌ ಜೊತೆಗಿನ ನನ್ನ ಒಡನಾಟ ಆಧರಿಸಿ ಹೇಳುವುದಾದರೆ ಅವರು ಒಳ್ಳೆಯ ವ್ಯಕ್ತಿ. ಅವರ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ. ರಾಜನ್‌ ದೇಶವನ್ನು ಪ್ರೀತಿಸುತ್ತಾರೆ. ಎಲ್ಲೇ ಕೆಲಸ ಮಾಡಿದರೂ ಅವರು ಭಾರತಕ್ಕಾಗಿ ಕೆಲಸ ಮಾಡುತ್ತಾರೆ’ ಎಂದರು.

ಆಡಳಿತದೆಡೆ ಗಮನ: ‘ನನ್ನ ಗಮನ ನೆಟ್ಟಿರುವುದು ಆಡಳಿತದ ಮೇಲೆ. ಚುನಾವಣೆಯನ್ನು ಮಾತ್ರ ಗುರಿಯಾಗಿರಿಸಿಕೊಂಡು ಸರ್ಕಾರ ನಡೆಸಿದ ಕಾರಣ ದೇಶ ನಷ್ಟ ಅನುಭವಿಸಿದೆ’ ಎಂದು ಮೋದಿ ಅವರು ಸಂದರ್ಶನದಲ್ಲಿ ಹೇಳಿದರು. ಚುನಾವಣೆ ಉದ್ದೇಶವೊಂದನ್ನೇ ಇಟ್ಟುಕೊಂಡು ಸರ್ಕಾರ ನಡೆಸುವುದು ಸರಿಯಲ್ಲ. ಜನಸಾಮಾನ್ಯರ ಬೇಡಿಕೆ, ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸಬೇಕು. ಚುನಾವಣೆ ಗೆಲ್ಲುವುದು ಅಥವಾ ಸೋಲುವುದು ಪ್ರಜಾತಂತ್ರದ ಭಾಗ ಎಂದು ಅವರು ಹೇಳಿದರು.

** *** **
ಪ್ರಚಾರದ ಉದ್ದೇಶಕ್ಕೆ ಟೀಕೆ ಮಾಡುವುದರಿಂದ ದೇಶಕ್ಕೇನೂ ಲಾಭವಿಲ್ಲ. ಜನ ಜವಾಬ್ದಾರಿ ಅರಿತು ವರ್ತಿಸಬೇಕು. ವ್ಯವಸ್ಥೆಗಿಂತಲೂ ವ್ಯಕ್ತಿ ಮೇಲು ಎಂದು ಭಾವಿಸುವುದು ತಪ್ಪು.
-ನರೇಂದ್ರ ಮೋದಿ,
ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.