ADVERTISEMENT

ರಾಜಿಗೆ ಮುಂದಾದ ಶರದ್‌ ಯಾದವ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ನವದೆಹಲಿ (ಪಿಟಿಐ): ಜನತಾ ಪರಿವಾರದಿಂದ ಹೊರನಡೆಯುವ ತೀರ್ಮಾನವನ್ನು ಸಮಾಜವಾದಿ ಪಕ್ಷ ಪ್ರಕಟಿಸುತ್ತಿದ್ದಂತೆ ಮಾತುಕತೆ ಮೂಲಕ ಮನಸ್ತಾಪಗಳನ್ನು ಬಗೆಹರಿಸಲು ಜೆಡಿ (ಯು) ಒಲವು ತೋರಿದೆ. 

ಎಲ್ಲಾ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಜೆಡಿ (ಯು) ಪ್ರಯತ್ನಕ್ಕೆ ಸಮಾಜವಾದಿ ಪಕ್ಷದ ಈ ನಡೆಯಿಂದ ತೀವ್ರ ಹಿನ್ನಡೆಯಾದಂತಾಗಿದೆ ಎಂಬುದನ್ನು ಪಕ್ಷದ ಅಧ್ಯಕ್ಷ ಶರದ್‌ ಯಾದವ್‌ ಅವರು ಅಲ್ಲಗಳೆದಿದ್ದು ‘ಇಡೀ ದೇಶವೇ ವಾದ ವಿವಾದಗಳಿಂದ ತುಂಬಿಹೋಗಿದೆ’ ಎಂದು ಗುರುವಾರ  ಪ್ರತಿಕ್ರಿಯಿಸಿದರು. ‘ಸಮಾಜವಾದಿ ಪಕ್ಷದ ತೀರ್ಮಾನದ ಬಗ್ಗೆ ‘ಭಾಯಿ’ (ಅಣ್ಣ) ಮುಲಾಯಂ ಜತೆ ಮಾತನಾಡಿ ಸೂಕ್ತ ಪರಿಹಾರ ಕಂಡು ಕೊಳ್ಳುವುದಾಗಿ ಶರದ್‌ ಸುದ್ದಿಗಾರರಿಗೆ ತಿಳಿಸಿದರು. 

ಆರ್‌ಜೆಡಿಗೆ ಬೈ ಎಸ್‌ಪಿಗೆ ಜೈ:  ಪಕ್ಷದ ಮುಖಂಡ ಲಾಲು ಪ್ರಸಾದ್‌ ಹಿರಿಯ ಮುಖಂಡರನ್ನು ಕಡೆಗಣಿಸಿ ತಮ್ಮ ಇಡೀ ಗಮನವನ್ನು ಕುಟುಂಬಕ್ಕೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಆರ್‌ಜೆಡಿ ಹಿರಿಯ ಮುಖಂಡ ರಘುನಾಥ್‌ ಝಾ, ತಮ್ಮ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಆರ್‌ಜೆಡಿಯ ಬ್ರಾಹ್ಮಣ ಮುಖಂಡರೆಂದು ಹೆಸರಾಗಿದ್ದ 76 ವರ್ಷದ ಝಾ ಸಮಾಜವಾದಿ ಪಕ್ಷ ಸೇರುವುದಾಗಿ ತಿಳಿಸಿದ್ದಾರೆ. ಅವರು ಆರ್‌ಜೆಡಿ ಸರ್ಕಾರದ ಅವಧಿಯಲ್ಲಿ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರಾಗಿದ್ದರು.ಲಾಲು ಪ್ರಸಾದ್‌ ಅವರಿಗೆ ಬರೆದಿರುವ ಪತ್ರದಲ್ಲಿ ಝಾ, ‘ನಾನು ಕಳೆದ 25 ವರ್ಷ ನಿಮ್ಮ ಎಲ್ಲಾ ಏಳು ಬೀಳುಗಳಲ್ಲಿ ಜೊತೆಗಿದ್ದೆ.

ಆದರೆ ಪಕ್ಷದ ಕಾರ್ಯಕರ್ತರೆಡೆಗಿನ ನಿಮ್ಮ ಇತ್ತೀಚಿನ ವರ್ತನೆ ಮತ್ತು ನನ್ನೆಡೆಗಿನ ನಿರ್ಲಕ್ಷ್ಯದಿಂದ ಬೇಸೆತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದಿದ್ದಾರೆ.‘ನಾನು ಸಮಾಜವಾದಿ ಪಕ್ಷವನ್ನು ಸೇರಿ ಅದನ್ನು ರಾಜ್ಯದಲ್ಲಿ ಬಲಪಡಿಸುತ್ತೇನೆ. ಶೆವೊಹರ್‌ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನ್ನ ಮಗ ಅಜಿತ್‌ ಕುಮಾರ್ ಝಾ ಸಹ ಎಸ್‌ಪಿ ಸೇರಲಿದ್ದಾನೆ’ ಎಂದಿದ್ದಾರೆ.

‘ಸೋಲಿನ ಭಯವೇ ಕಾರಣ’: ಬಿಹಾರದಲ್ಲಿ ಬಿಜೆಪಿ ವಿರೋಧಿ  ಮೈತ್ರಿಕೂಟದಿಂದ ಎಸ್‌ಪಿ ಹೊರನಡೆದಿರುವುದು ಸೀಟು ಹಂಚಿಕೆಯಲ್ಲಿನ ಅಸಮಾಧಾನದಿಂದಲ್ಲ, ಅದು ವಿಫಲ ಮೈತ್ರಿ ಎಂಬುದನ್ನು ತಿಳಿದಿರುವ ಕಾರಣಕ್ಕೆ ಎಂದು ಬಿಜೆಪಿ ವ್ಯಾಖ್ಯಾನಿಸಿದೆ. ‘ಜನತಾ ಪರಿವಾರದಿಂದ ಎಸ್‌ಪಿ ಹೊರ ನಡೆದಿರುವುದು ಕೇವಲ ಐದು ಸೀಟುಗಳನ್ನು ನೀಡಲಾಗಿದೆ ಎಂದಲ್ಲ. ಮೈತ್ರಿಕೂಟ ವಿಫಲವಾಗಲಿದೆ ಮತ್ತು ಬಿಹಾರ ಯುದ್ಧದಲ್ಲಿ ಸೋಲಲಿದೆ ಎಂಬ ವಾಸ್ತವವದ ಅರಿವಾಗಿದ್ದೇ ಇದಕ್ಕೆ ಕಾರಣ’ ಎಂದು ಬಿಜೆಪಿ ಮುಖಂಡ ರಾಜೀವ್‌ ಪ್ರತಾಪ್ ರೂಡಿ ಟೀಕಿಸಿದ್ದಾರೆ.

ಎಸ್‌ಪಿಗೆ ಎನ್‌ಸಿಪಿ ಬೆಂಬಲ: ಮಹಾ ಮೈತ್ರಿಕೂಟದಿಂದ ಮೊದಲು ಹೊರನಡೆದಿದ್ದ ಎನ್‌ಸಿಪಿ, ಎಸ್‌ಪಿಯ ನಿರ್ಧಾರವನ್ನು ಸ್ವಾಗತಿಸಿದೆ. ರಾಜ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ತೃತೀಯ ರಂಗವನ್ನು ಹುಟ್ಟುಹಾಕುವ ತನ್ನ ಪ್ರಯತ್ನಕ್ಕೆ ಕೈಜೋಡಿಸಲು ಎಸ್‌ಪಿಗೆ ಬಾಗಿಲು ತೆರೆದಿರುತ್ತದೆ ಎಂದು ಅದು ಹೇಳಿದೆ.

*
ಹತಾಶೆಯ ಸಂಕೇತ
ಪಟ್ನಾ (ಐಎಎನ್‌ಎಸ್‌):
ಜನತಾ ಪರಿವಾರದಿಂದ ಹೊರನಡೆದ ಎಸ್‌ಪಿಯ ನಡೆ, ಅದರ ಹತಾಶೆ ಮತ್ತು ಅತಿಯಾದ ದುರಾಸೆಯನ್ನು ಬಿಂಬಿಸುತ್ತದೆ ಎಂದು ಬಿಜೆಪಿ ಹಿರಿಯ ಶಾಸಕ ಅರುಣ್‌ ಸಿನ್ಹಾ ಟೀಕಿಸಿದ್ದಾರೆ. ‘ಸಮಾಜವಾದಿ ಪಕ್ಷದ ನಡೆಯು ಅದು ಎಷ್ಟು ಹತಾಶವಾಗಿದೆ ಮತ್ತು ಅತಿ ದುರಾಸೆ ಹೊಂದಿದೆ ಎಂಬುದನ್ನು ತೋರಿಸುತ್ತದೆ. ಅವೆಲ್ಲರೂ ತನ್ನ ವೈಯಕ್ತಿಕ ಲಾಭಕ್ಕಾಗಿ ಒಂದುಗೂಡಿದ್ದರು’ ಎಂದರು.

‘ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬಿಜೆಪಿ ಮತ್ತು ಬಿಹಾರದ ಜನರು ಸೇರಿದಂತೆ ಎಲ್ಲರನ್ನೂ ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ವಂಚಿಸಿದ್ದಾರೆ. 2010ರ ಚುನಾವಣೆಯಲ್ಲಿ ಸಿಕ್ಕ ಗೆಲುವು ಎನ್‌ಡಿಗೆ ಹೊರತು ತಮ್ಮ ಪಕ್ಷವೊಂದಕ್ಕೆ ಮಾತ್ರವಲ್ಲ ಎಂಬುದನ್ನು ಅವರು ಮರೆತಿದ್ದಾರೆ’ ಎಂದು ಸಿನ್ಹಾ ಟೀಕಿಸಿದರು.

*
ನಮ್ಮ ಮೈತ್ರಿ ಉಳಿಯಲಿದೆ. ನಾವು ಮಾತನಾಡುತ್ತೇವೆ. ಅದು (ಎಸ್‌ಪಿ ನಿರ್ಧಾರ) ನಮ್ಮ ಮೈತ್ರಿಗೆ ಧಕ್ಕೆ ತರುವುದಿಲ್ಲ ಎಂದು ಭರವಸೆ ನೀಡುತ್ತೇನೆ.
-ಶರದ್‌ ಯಾದವ್,
ಜೆಡಿ(ಯು) ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT