ADVERTISEMENT

ರೈತರಿಂದ ಖರೀದಿಗೆ ನಿರ್ಬಂಧ ಇಲ್ಲ

ಜಾನುವಾರು ಹತ್ಯೆ ನಿಯಮ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ರೈತರಿಂದ ಖರೀದಿಗೆ ನಿರ್ಬಂಧ ಇಲ್ಲ
ರೈತರಿಂದ ಖರೀದಿಗೆ ನಿರ್ಬಂಧ ಇಲ್ಲ   

ನವದೆಹಲಿ: ಮಾಂಸದ ಉದ್ಯಮ ಅಥವಾ ವ್ಯಾಪಾರಿಗಳು ಮಾಂಸಕ್ಕಾಗಿ ರೈತರಿಂದ ನೇರವಾಗಿ ಜಾನುವಾರುಗಳನ್ನು ಖರೀದಿಸಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ಶನಿವಾರ ಸ್ಪಷ್ಟನೆ ನೀಡಿದೆ.

ಹತ್ಯೆಯ (ಮಾಂಸಕ್ಕಾಗಿ) ಉದ್ದೇಶಕ್ಕೆ ಪ್ರಾಣಿಗಳ ಮಾರುಕಟ್ಟೆಗಳಲ್ಲಿ ಜಾನುವಾರುಗಳ ಮಾರಾಟ ಮತ್ತು ಖರೀದಿಗೆ ನಿರ್ಬಂಧ ವಿಧಿಸಿ ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ಮಾಂಸ ಉದ್ಯಮ ಸೇರಿದಂತೆ ವಿವಿಧ ವಲಯಗಳಿಂದ ವಿರೋಧ ಮತ್ತು ಕಳವಳ ವ್ಯಕ್ತವಾದ ಬೆನ್ನಲ್ಲೇ ಅದು ಈ ಸ್ಪಷ್ಟನೆ ನೀಡಿದೆ.

‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು–2017ರಲ್ಲಿನ ಕೆಲವು ಅಂಶಗಳ ಬಗ್ಗೆ ಶನಿವಾರ  ಕೆಲವು ಮನವಿಗಳು ಬಂದಿವೆ. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು’ ಎಂದು ಅದು ಹೇಳಿದೆ.

ಮೇ 23ರಂದು ಗೆಜೆಟ್‌ ಅಧಿಸೂಚನೆ ಮೂಲಕ ಹೊರಡಿಸಲಾಗಿರುವ ಹೊಸ ನಿಯಮಗಳ ಪ್ರಕಾರ, ಮಾರುಕಟ್ಟೆಯಲ್ಲಿ ಮಾಂಸಕ್ಕಾಗಿ ಜಾನುವಾರು ಮಾರಾಟ ಮಾಡುತ್ತಿಲ್ಲ ಎಂದು ಮಾರಾಟಗಾರ ಮತ್ತು ಖರೀದಿದಾರ ಮುಚ್ಚಳಿಕೆ ಬರೆದುಕೊಡಬೇಕು.

ಪರಿಸರ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯು ದೇಶದಾದ್ಯಂತ ಪರ – ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.  

ರೈತರು ಜಾನುವಾರುಗಳನ್ನು ಮಾಂಸ ಸಂಸ್ಕರಣ ಘಟಕಗಳಿಗೆ ನೇರವಾಗಿ ಮಾರಾಟ ಮಾಡುವುದಕ್ಕೆ ತಡೆ ಒಡ್ಡುವುದಕ್ಕಾಗಿ ಹೊಸ ನಿಯಮಗಳ ಕೆಲವು ನಿಬಂಧನೆಗಳನ್ನು ದುರ್ಬಳಕೆ ಮಾಡುವ ಸಾಧ್ಯತೆಯ ಬಗ್ಗೆ ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ.

ದುರ್ಬಳಕೆ ಹೇಗೆ?: ಉದಾಹರಣೆಗೆ, ಮಾರುಕಟ್ಟೆ ಅಥವಾ ಕಸಾಯಿಖಾನೆಗೆ ಹೊಂದಿಕೊಂಡಿರುವಂತಹ ದೊಡ್ಡಿಯನ್ನು ಕೂಡ ಈ ನಿಯಮಗಳಲ್ಲಿ ‘ಪ್ರಾಣಿಗಳ ಮಾರುಕಟ್ಟೆ’ ಎಂದು ವ್ಯಾಖ್ಯಾನಿಸಲಾಗಿದೆ. ಬಹುತೇಕ ಎಲ್ಲ ಮಾಂಸ ಸಂಸ್ಕರಣ ಘಟಕಗಳ/ಕಂಪೆನಿಗಳ ಪಕ್ಕದಲ್ಲೇ ದೊಡ್ಡಿಗಳು ಇರುತ್ತವೆ.

ಹೊಸ ನಿಯಮಗಳನ್ನು ಇದಕ್ಕೆ ಅನ್ವಯ ಮಾಡಿ, ರೈತರು ಬರಡು ಜಾನುವಾರುಗಳನ್ನು ಮಾಂಸ ಸಂಸ್ಕರಣ ಕಂಪೆನಿಗಳಿಗೆ ನೇರವಾಗಿ ಮಾರಾಟ ಮಾಡುವದನ್ನು ತಡೆಬಹುದು ಎಂದ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಾಣಿಗಳ ಮಾರುಕಟ್ಟೆಯಲ್ಲಿ ತಮ್ಮ ಜಾನುವಾರುಗಳಿಗೆ ಬೆಲೆ ನಿಗದಿ ಪಡಿಸುವ ವಿಷಯದಲ್ಲಿ ರೈತರಿಗೆ ಚೌಕಾಸಿ ಮಾಡಲು ಹೊಸ ನಿಯಮದಲ್ಲಿ ಅವಕಾಶ ಇಲ್ಲ. ಖರೀದಿದಾರ ಹೇಳಿದ ಬೆಲೆಗೆ ಅಥವಾ  ಕಂಪೆನಿಗಳು ಕೊಟ್ಟ ಬೆಲೆಗೆ ಜಾನುವಾರುಗಳನ್ನು ಮಾರಾಟ ಮಾಡಬೇಕಾಗುತ್ತದೆ ಎಂಬುದು ಮಾಂಸ ಮಾರಾಟಗಾರರ ವಾದ.

‘ಅಧಿಸೂಚಿತ ಜಾನುವಾರು ಮಾರುಕಟ್ಟೆಗಳಲ್ಲಿ ಖರೀದಿಸುವ ಮತ್ತು ಮಾರಾಟ ಮಾಡುವ ಹಾಗೂ ಆಸ್ತಿ ಎಂದು ಪರಿಗಣಿಸಿ ಹರಾಜು ಹಾಕುವ ಪ್ರಾಣಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ’ ಎಂದು ಸಚಿವಾಲಯ ಹೇಳಿದೆ.
*
ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯ ತಡೆಯುವುದು ಹೊಸ ನಿಯಮಗಳ ಉದ್ದೇಶವೇ ಹೊರತು, ಕಸಾಯಿಖಾನೆಗಳಿಗೆ ಜಾನುವಾರು ಮಾರಾಟ ವ್ಯವಸ್ಥೆ ನಿಯಂತ್ರಿಸುವುದಲ್ಲ.
ಕೇಂದ್ರ ಪರಿಸರ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT